

ಹುಬ್ಬಳ್ಳಿ : ಶಾಸಕರನ್ನು ಖರೀದಿಸುವ ಅವಶ್ಯಕತೆ ಬಿಜೆಪಿಗೆ ಇಲ್ಲ. 100 ಕೋಟಿ ರೂ. ಕೊಟ್ಟು ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಖರೀದಿಸಲು ಯತ್ನಿಸುತ್ತಿದೆ ಎಂಬ ಶಾಸಕ ರವಿ ಗಾಣಿಗ ಅವರ ಹೇಳಿಕೆ ಬಾಲಿಶತನದಿಂದ ಕೂಡಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಟೀಕಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇವಲ ಪ್ರಚಾರಕ್ಕಾಗಿ ರವಿ ಗಾಣಿಗ ಅವರು ಇಲ್ಲದ ಸಲ್ಲದ ಹೇಳಿಕೆಗಳನ್ನು ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡುಗಿನ ತರಹ ಆಗಿದೆ. ಆ ಪಕ್ಷ ತನ್ನಿಂದ ತಾನೇ ಪತನವಾಗುವುದು ಗೋಚರವಾಗುತ್ತಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಬೆಳಗಾವಿ ಶಾಸಕ ರಾಜು ಕಾಗೆ ಅವರು, ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡದಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧವೆಂಬ ಹೇಳಿಕೆ ನೀಡಿದ್ದನ್ನು ರವಿ ಗಾಣಿಗ ಅವರು ಸ್ಮರಿಸಿಕೊಳ್ಳಬೇಕಾಗುತ್ತದೆ. ಈಗಾಗಲೇ ಹತ್ತು ಹಲವಾರು ಶಾಸಕರು ಕಾಂಗ್ರೆಸ್ನಿಂದ ಒಂದು ಕಾಲನ್ನು ಹೊರಗಿಟ್ಟಿದ್ದಾರೆ. ಈ ರೀತಿ ಹಿಟ್ ಆಂಡ್ ರನ್ ರೀತಿ ಇಲ್ಲದ ಸಲ್ಲದ ಹೇಳಿಕೆ ನೀಡುವುದರಿಂದ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದಿದ್ದಾರೆ.