ಎಸ್‌ಕೆಎನ್‌ಜಿ ಕಾಲೇಜಿಗೆ ಪ್ರೊ.ಜಗದೇವಿ ಕಲಶೆಟ್ಟಿಯವರೇ ಪ್ರಾಚಾರ್ಯೆ

CDC
ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿಗೆ ಸಿಡಿಸಿ ಅಧ್ಯಕ್ಷ ಹಾಗೂ ಶಾಸಕ ಗಾಲಿ ಜನಾರ್ದನರೆಡ್ಡಿ ಬುಧವಾರ ಭೇಟಿ ನೀಡಿ ಪ್ರಾಧ್ಯಾಪಕರೊಂದಿಗೆ ಬುಧವಾರ ಸಭೆ ನಡೆಸಿದರು. ಪ್ರಾಚಾರ್ಯೆ ಪ್ರೊ.ಜಗದೇವಿ ಕಲಶೆಟ್ಟಿ, ಪ್ರಾಧ್ಯಾಪಕರಾದ ಡಾ.ಜಾಜಿ ದೇವೇಂದ್ರಪ್ಪ, ಪ್ರೊ.ಸುಂಕೇಶ್ವರ ಕರಿಗೂಳಿ ಇತರರಿದ್ದರು.
Published on

ಗಂಗಾವತಿ: ಪ್ರಾಧ್ಯಾಪಕರು ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕಿದ್ದು, ಉತ್ತಮ ಫಲಿತಾಂಶದತ್ತ ಗಮನಹರಿಸುವಂತೆ ಸಿಡಿಸಿ ಅಧ್ಯಕ್ಷ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪ್ರಾಧ್ಯಾಪಕರೊಂದಿಗಿನ ಸಭೆಯಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯೆಯಾಗಿ ಇಲಾಖೆಯಿಂದ ನಿಯೋಜನೆಗೊಂಡಿರುವ ಪ್ರೊ.ಜಗದೇವಿ ಕಲಶೆಟ್ಟಿಯವರೇ ಮುಂದುವರಿಯಲಿದ್ದು, ಉನ್ನತ ಶಿಕ್ಷಣ ಇಲಾಖೆಯಿಂದ ಪರವಾನಗಿ ಪಡೆಯದೇ ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪಗೆ ಅಧಿಕಾರ ಹಸ್ತಾಂತರಿಸಿದ್ದು ತಪ್ಪು ಎಂದರು.

ಶಾಸಕರೇ ಸಿಡಿಸಿ ಅಧ್ಯಕ್ಷರಾಗಿದ್ದರಿಂದ ನನ್ನ ಗಮನಕ್ಕೆ ತರದೇ ತರಾತುರಿಯಲ್ಲಿ ಇನ್ನೊಬ್ಬರಿಗೆ ಅಧಿಕಾರ ನೀಡಿದ್ದು ಸರಿಯಲ್ಲ. ಇಲಾಖೆ ನಿಯಮಾನುಸಾರ ಅರ್ಹರಿಗೆ ಪ್ರಾಚಾರ್ಯ ಹುದ್ದೆ ಲಭಿಸಲಿದ್ದು, ಇನ್ನೊಂದು ಸಭೆಯಲ್ಲಿ ಇತ್ಯರ್ಥಗೊಳಿಸಲಾಗುವುದು. ದಾನಿಗಳ ನೆರವಿನೊಂದಿಗೆ ಕಾಲೇಜು ಅಭಿವೃದ್ಧಿಪಡಿಸಲಾಗುತ್ತಿದ್ದು, ಸ್ನಾತಕೋತ್ತರ ವಿಭಾಗ ತೆರೆಯಲು ಇಲಾಖೆ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.

ಸಿಡಿಸಿ ಅಧ್ಯಕ್ಷ ಮತ್ತು ಪ್ರಾಧ್ಯಾಪಕರ ವಿಶ್ವಾಸ ಗಳಿಸದೇ ಇನ್ನೊಬ್ಬರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದು ಏಕಪಕ್ಷೀಯ ವರ್ತನೆ ಎಂದು ಕೆಲ ಅಧ್ಯಾಪಕರು ದೂರಿದರು.

ಮನವಿ ಸಲ್ಲಿಕೆ: ಇದೇ ಸಂದರ್ಭದಲ್ಲಿ ಶಾಸಕ ರೆಡ್ಡಿಯನ್ನು ಭೇಟಿಯಾದ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು, ಕಾಯಂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಇಂಗ್ಲಿಷ್ ಸ್ನಾತಕೋತ್ತರ ವಿಭಾಗ ತೆರೆಯಲು ಸಹಕರಿಸುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಕಾಲೇಜಿಗೆ ಭೇಟಿ ನೀಡಿದ ಭೂದಾನಿಗಳಾದ ರಾಧಾಕೊಲ್ಲಿ, ಮಲ್ಲಿಕಾರ್ಜುನ ಕೊಲ್ಲಿ, ಕಾಲೇಜಿನಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ. ದಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷಿಸಲಾಗುತ್ತಿದ್ದು, ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದರು. ಪ್ರಾಚಾರ್ಯೆ ಪ್ರೊ.ಜಗದೇವಿ ಕಲಶೆಟ್ಟಿ, ಪ್ರಾಧ್ಯಾಪಕರಾದ ಡಾ.ಜಾಜಿ ದೇವೇಂದ್ರಪ್ಪ, ಪ್ರೊ.ಸುಂಕೇಶ್ವರ ಕರಿಗೂಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net