

ಮೈಸೂರು: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳ ಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ತಾಲೂಕಿನ ಜಯಪುರ ಹೋಬಳಿಯ ಮುರುಡಗಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಎಲ್ಲ ಅಧಿಕಾರಿಗಳು ಇಂದು ಮುರುಡಗಳ್ಳಿ ಗ್ರಾಮಕ್ಕೆ ಆಗಮಿಸಿದ್ದಾರೆ. ಇಲಾಖೆಗಳಲ್ಲಿ ಆಗಬೇಕಾದ ಕೆಲಸ ಕಾರ್ಯಗಳನ್ನು ಜನರು ಸ್ಥಳದಲ್ಲಿಯೇ ಮಾಡಿಸಿಕೊಳ್ಳಬಹುದು ಎಂದರು.
ಪಿಂಚಣಿ, ವಿಧಾವ ವೇತನ, ಅಂಗವಿಕಲರ ವೇತನ, ಪಹಣಿ ದೋಷಗಳ ತಿದ್ದುಪಡಿ, ಕೆರೆ ಒತ್ತುವರಿಗೆ ತೆರವುಗೊಳಿಸುವುದು, ಪೌತಿ ಖಾತೆ ಮಾಡಿಕೊಡುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಈ ಕಾರ್ಯಕ್ರಮದಲ್ಲಿ ಪರಿಹರಿಸಿಕೊಳ್ಳಬಹುದು.
ಮುರುಡಗಳ್ಳಿ ಗ್ರಾಮದ ಕೆರೆ ಒತ್ತುವರಿ ತೆರವುಗೊಳಿಸಬೇಕು, ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಬೇಕು, ಕಬಿನಿ ಕುಡಿಯುವ ನೀರು ಸಮಪರ್ಕವಾಗಿ ಒದಗಿಸಬೇಕು, ಶಾಲಾ ಕೊಠಡಿ ನಿರ್ಮಾಣ ಮಾಡಬೇಕು, ಬಸ್ ಸೌಲಭ್ಯ ಒದಗಿಸಬೇಕು ಹಾಗೂ ಸ್ಮಶಾನಕ್ಕೆ ಜಮೀನು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಿರೀಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.