

ಮೈಸೂರು: ನಗರ ಹಾಗೂ ನಗರದ ಹೊರವಲಯದ ಬೆಳವಣಿಗೆಗೆ ಪೂರಕವಾಗಿ ವಿವಿಧ ಪೊಲೀಸ್ ಠಾಣೆಗಳ ಸರಹದ್ದು ವಿಸ್ತರಣೆ ಹಾಗೂ ಠಾಣೆಗಳ ಬದಲಾವಣೆಗೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್‌ಗೆ ಬೆಂಗಳೂರಿನಲ್ಲಿ ಸೋಮವಾರ ಶಾಸಕ ಜಿ.ಟಿ. ದೇವೇಗೌಡ ಮನವಿ ಸಲ್ಲಿಸಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಮೈಸೂರು ನಗರ ಹಾಗೂ ಗ್ರಾಮೀಣ ಪ್ರದೇಶವನ್ನು ಹೊಂದಿದೆ. ಕ್ಷೇತ್ರದಲ್ಲಿ ಮೈಸೂರು ನಗರ ಪಾಲಿಕೆ, ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ಬೋಗಾದಿ, ರಮ್ಮನಹಳ್ಳಿ ಹಾಗೂ ಕಡಕೊಳ ಪಟ್ಟಣ ಪಂಚಾಯಿತಿಗಳು ಹಾಗೂ 18 ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿವೆ. ಮೈಸೂರು ನಗರ ವ್ಯಾಪ್ತಿಯಲ್ಲಿ 17 ಪೊಲೀಸ್ ಠಾಣೆಗಳು ಹಾಗೂ ತಾಲೂಕು ವ್ಯಾಪ್ತಿಯಲ್ಲಿ 3 ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಜನರ ಅನುಕೂಲ ಹಾಗೂ ನಗರದ ಬೆಳವಣಿಗೆಯನ್ನು ಗಮನದಲ್ಲಿಟ್ಟು ಕೊಂಡು ಪೊಲೀಸ್ ಠಾಣೆಗಳ ಸರಹದ್ದು ಬದಲಾವಣೆ ಹಾಗೂ ಠಾಣೆಗಳ ಬದಲಾವಣೆಯ ಅವಶ್ಯಕತೆ ಇದೆ ಎಂದು ಮನವಿಯಲ್ಲಿ ಜಿ.ಟಿ.ದೇವೇಗೌಡರು ಗಮನ ಸೆಳೆದಿದ್ದಾರೆ.
ಜಯಪುರ ಪೊಲೀಸ್ ಠಾಣೆಯು ವರ್ತುಲ ರಸ್ತೆಯಿಂದ 15 ಕಿ.ಮೀ. ದೂರದಲ್ಲಿದೆ. ಸದರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ದಾಸನಕೊಪ್ಪಲು, ಮರಟಿಕ್ಯಾತನಹಳ್ಳಿ ಗ್ರಾಮಗಳು ಜಯಪುರ ಪೊಲೀಸ್ ಠಾಣೆಯಿಂದ 20 ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ಪಕ್ಕದಲ್ಲೇ ಇರುವ ಬೋಗಾದಿ ಪಟ್ಟಣವು ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದೆ. ಹಾಗಾಗಿ ದಾಸನಕೊಪ್ಪಲು, ಮರಟಿ ಕ್ಯಾತನಹಳ್ಳಿ ಗ್ರಾಮವನ್ನು ಸರಸ್ವತಿಪುರಂ ಠಾಣೆ ವ್ಯಾಪ್ತಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಆಲನಹಳ್ಳಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಬಡಾವಣೆಗಳು ಹಾಗೂ ಗ್ರಾಮಗಳು ಮೈಸೂರು ದಕ್ಷಿಣ ಠಾಣೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾದರೆ ದೂರದ ಮೈಸೂರು ದಕ್ಷಿಣ ಪೊಲೀಸ್ ಠಾಣೆಗೆ ಹೋಗಬೇಕು. ಹಾಗಾಗಿ ಆಲಹನಳ್ಳಿ ಪೊಲೀಸ್ ಠಾಣೆ ಸುತ್ತಮುತ್ತ ಇರುವ ಬಡಾವಣೆಗಳನ್ನು ಆಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿಸಲು ಕ್ರಮ ವಹಿಸಬೇಕು ಎಂದು ಕೋರಿಕೊಂಡರು.
ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬೆಳವಾಡಿ ಗ್ರಾಮ ಒಳಪಟ್ಟಿದೆ. ಬೆಳವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಗ್ರಾಮದ ಗಡಿಯಲ್ಲಿದ್ದು, ಈ ಶಾಲೆಯಲ್ಲಿ ಕಳ್ಳತನವಾದರೆ ವಿಜಯನಗರ ಠಾಣೆಯವರು ಮೊಕ್ಕದಮೆ ದಾಖಲಿಸುವುದಿಲ್ಲ, ಇಲವಾಲ ಠಾಣೆಯವರೂ ಪ್ರಕರಣ ದಾಖಲಿಸುವುದಿಲ್ಲ, ಈ ಗೊಂದಲ ಬಗೆಹರಿಸಬೇಕು. ನಗರ ಹಾಗೂ ನಗರದಲ್ಲಿರುವ ಕೈಗಾರಿಕಾ ಪ್ರದೇಶ ಸಾಕಷ್ಟು ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ಈ ಬೆಳವಣಿಗೆಗೆ ಪೂರಕವಾಗಿ ಪೊಲೀಸ್ ಠಾಣೆಗಳ ಸರಹದ್ದು ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಬೆಟ್ಟದಲ್ಲಿ ಆಸ್ಪತ್ರೆ ನಿರ್ಮಿಸಿ
ಚಾಮುಂಡಿಬೆಟ್ಟಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಆಸ್ಪತ್ರೆ ನಿರ್ಮಿಸಲು ಹಾಗೂ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವಂತೆ ಜಿ.ಟಿ. ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.