ನಾಗನಹಳ್ಳಿ, ಸಿದ್ದಲಿಂಗಪುರ ಭಾಗಕ್ಕೆ ಶೀಘ್ರ ಶುದ್ಧಜಲ: ಶಾಸಕ ಜಿ.ಟಿ.ದೇವೇಗೌಡ ಭರವಸೆ

9
Published on

ಮೈಸೂರು: ನಾಗನಹಳ್ಳಿ ಮತ್ತು ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನದಿಯಿಂದ ಶೀಘ್ರದಲ್ಲೇ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಶಾಸಕ ಜಿ.ಟಿ.ದೇವೇಗೌಡ ಭರವಸೆ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಬೆಲವತ್ತ ಗ್ರಾಮದಲ್ಲಿ 1.75 ಲಕ್ಷ ಲೀಟರ್ ಹಾಗೂ 1.5 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಟ್ಯಾಂಕ್‌ಗಳ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಮ್ಮನಹಳ್ಳಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಬೆಲವತ್ತ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಟ್ಯಾಂಕ್‌ಗೆ ನೀರು ಬಂದು, ಅಲ್ಲಿಂದ ಸುತ್ತ ಮುತ್ತಲ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು.

ಅಲ್ಲದೆ ಹಂತ ಹಂತವಾಗಿ ನಾಗನಹಳ್ಳಿ ಮತ್ತು ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನದಿಯಿಂದ ಶೀಘ್ರದಲ್ಲೇ ಶುದ್ಧ ಕುಡಿಯುವ ನೀರನ್ನು ಒದಗಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಈ ಕಾಮಗಾರಿಗೆ 30 ಕೋಟಿ ರೂ.ಮಂಜೂರಾಗಿದ್ದು, ಮುಂದಿನ ವರ್ಷದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲಾಗುವುದು ಎಂದು ತಿಳಿಸಿದರು.

ಸಿದ್ದಲಿಂಗಪುರ, ಕೆ.ಆರ್.ಮಿಲ್, ಬೆಲವತ್ತ, ಹಳೇ ಕೆಸರೆ, ಕಾಮನಕೆರೆಹುಂಡಿ, ನಾಗನಹಳ್ಳಿ, ಶ್ಯಾದನಹಳ್ಳಿ, ಲಕ್ಷ್ಮೀಪುರ ಹಾಗೂ ಕಳಸ್ತವಾಡಿ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸಿದಂತಾಗುತ್ತದೆ ಎಂದು ಹೇಳಿದರು.

ಖಾಸಗಿ ಬಡಾವಣೆಗಳಿಗೂ ನೀರು ಹರಿಸಲು ಕ್ರಮವಹಿಸಲಾಗಿದೆ. ಅದಕ್ಕಾಗಿ ಯೋಜನೆಯನ್ನು ರೂಪಿಸಿದ್ದು, ಮುಂದಿನ ಎಂಡಿಎ ಸಭೆಯಲ್ಲಿ ಅನುಮೋದನೆ ಸಿಗಲಿದೆ. ಬೆಲವತ್ತ ಗ್ರಾಮದಲ್ಲಿ ಈಗಾಗಲೇ 8 ಕೋಟಿ ರೂ.ಅನುದಾನದಲ್ಲಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಬಾಕಿ ಇರುವ ಮಳೆ ನೀರು ಚರಂಡಿ ಹಾಗೂ ಒಳಚರಂಡಿ ಕಾಮಗಾರಿಯನ್ನು ಶೀಘ್ರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊಳಚೆ ನೀರು ತಡೆಗಟ್ಟಲು ಸೂಚನೆ:

ಮೈಸೂರು ನಗರದಿಂದ ಹಳೇ ಕೆಸರೆ ಗಾಮದ ಹತ್ತಿರ ಮಳೆ ನೀರು ಚರಂಡಿಯಲ್ಲಿ ಕೊಳಚೆ ನೀರು ಹರಿದು ಬರುತ್ತಿದ್ದು, ಈ ನೀರು ಅಕ್ಕ-ಪಕ್ಕದ ಜಮೀನುಗಳಿಗೆ ಹೋಗಿ ರೈತರು ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.

ಮನವಿ ಆಲಿಸಿದ ಜಿ.ಟಿ.ದೇವೇಗೌಡ ಅವರು, ಸ್ಥಳದಲ್ಲಿಯೇ ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚಿಸಿ, ಮಳೆ ನೀರು ಚರಂಡಿ ಕಾಮಗಾರಿಯನ್ನು ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು. ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಸ್ಕೈವಾಕ್ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಹಾಗೂ ಎನ್‌ಎಚ್‌ಎ ವತಿಯಿಂದ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಜಿಪಂ ಮಾಜಿ ಸದಸ್ಯ ನಾಗನಹಳ್ಳಿ ದಿನೇಶ್, ಮುಖಂಡ ಮಂಜುಗೌಡ, ತಾಪಂ ಮಾಜಿ ಅಧ್ಯಕ್ಷ ಬೆಲವತ್ತ ಕುಮಾರ್, ಮಾಜಿ ಸದಸ್ಯ ರೇವಣ್ಣ, ಸಿದ್ದಲಿಂಗಪುರ ಗ್ರಾಪಂ ಅಧ್ಯಕ್ಷ ಮಾದೇಶ್, ಸಿದ್ದಲಿಂಗಪುರ ಮಂಜು, ನಾಗನಹಳ್ಳಿ ಗ್ರಾಪಂ ಅಧ್ಯಕ್ಷೆ ರಶ್ಮಿ ಮಂಜು , ಉಪಾಧ್ಯಕ್ಷೆ ಜ್ಯೋತಿ, ಮಾಜಿ ಅಧ್ಯಕ್ಷ ಭಾಸ್ಕರ್, ಸದಸ್ಯರಾದ ಶ್ರೀನಿವಾಸ್, ರವಿಕಾಂತ್, ಪ್ರೇಮಮ್ಮ, ವಿನೋದ್ ಕುಮಾರ್, ನಾಯ್ದು, ಕಮಲಾಕ್ಷಿ, ದಶರಥ, ಗಂಗಾಧರ್ ಗುರು, ತೀರ್ಥಕುಮಾರ್, ವೆಂಕಟೇಶ್, ಶಶಿಕಲಾ, ಪ್ರಕಾಶ, ರಾಘವೇಂದ್ರ, ವಿನುತಾ, ಕೆ.ಆರ್.ಮಿಲ್. ಆಶಾ, ಸುಜಾತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net