ಪಂಚಮಸಾಲಿ ಸಮಾಜದ ಋಣ ತೀರಿಸುವೆ ಎಂದ ಜಿಎಸ್‌ಪಿ

16 GJD- 3
ಗಜೇಂದ್ರಗಡ ಪಟ್ಟಣದ ಜಿ.ಕೆ. ಬಂಡಿ ಗಾರ್ಡನ್‌ನಲ್ಲಿ ಭಾನುವಾರ ರೋಣ ಮತಕ್ಷೇತ್ರದ ವೀರಶೈವ ಪಂಚಮಸಾಲಿ ಸಮಾಜದ ವತಿಯಿಂದ ಏರ್ಪಾಟಾಗಿದ್ದ ಸನ್ಮಾನ ಸಮಾರಂಭದಲ್ಲಿ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಮಾಜದ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
Published on

ಗಜೇಂದ್ರಗಡ: ಪಂಚಮಸಾಲಿ ಸಮಾಜವೂ ಸೇರಿದಂತೆ ಎಲ್ಲ ಸಮಾಜಗಳ ಋಣ ನನ್ನ ಮೇಲಿದೆ. ಆ ಸಮಾಜಗಳ ಋಣ ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಜಿ.ಎಸ್. ಪಾಟೀಲ ಭರವಸೆ ನೀಡಿದರು.

ಪಟ್ಟಣದ ಜಿ.ಕೆ. ಬಂಡಿ ಗಾರ್ಡನ್‌ನಲ್ಲಿ ಭಾನುವಾರ ರೋಣ ಮತಕ್ಷೇತ್ರದ ವೀರಶೈವ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು, ಕಳೆದ 40 ವರ್ಷಗಳಲ್ಲೇ ಈ ಬಾರಿ ಗಜೇಂದ್ರಗಡದಲ್ಲಿ ಹೆಚ್ಚಿನ ಮತಗಳು ನನಗೆ ಲಭಿಸಿವೆ. ಪಂಚಮಸಾಲಿ ಸಮಾಜದವರು ಅಪಾರ ಕಾಳಜಿಯಿಟ್ಟು ಮತ ನೀಡಿದ್ದಾರೆ. ಅವರ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇನೆ. 25 ಸಾವಿರ ಮತಗಳ ಅಂತರದಿಂದ ಗೆಲ್ಲಲು ಪಂಚಮಸಾಲಿ ಸಮಾಜ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ಜಾತಿಗೊಬ್ಬರು ಜಗದ್ಗುರುಗಳನ್ನು ಎಲ್ಲ ಸಮಾಜದವರು ನೇಮಿಸಿಕೊಂಡಿದ್ದಾರೆ. ಆದರೆ ವೀರಶೈವ ಲಿಂಗಾಯತರು ಒಂದೇ ಎಂಬ ಭಾವನೆ ಒಬ್ಬರ ಮನಸಿನಲ್ಲಿಯೂ ಬಂದಿಲ್ಲ ಎಂದು ಜಿ.ಎಸ್.ಪಾಟೀಲರು ಬೇಸರ ವ್ಯಕ್ತಪಡಿಸಿದರು.

ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮಾಜದ 13 ಜಾತಿಗಳು ಮಾತ್ರ ಸೇರ್ಪಡೆಯಾಗಿವೆ. ವೀರಶೈವ ಲಿಂಗಾಯತ ಸಮಾಜದ ಎಲ್ಲ ಜಾತಿಗಳನ್ನು ಒಗ್ಗೂಡಿಸಿ ಹೋರಾಟ ಮಾಡಲು ಶ್ರೀಶೈಲ ಜಗದ್ಗುರುಗಳು ಹೋರಾಡುತ್ತಿದ್ದಾರೆ. ಅವರಿಗೆ ವೀರಶೈವ ಲಿಂಗಾಯತ ಸಮಾಜದ ಉಪಪಂಗಡಗಳು ಬೆಂಬಲ ನೀಡಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿದರು, ಗದ್ದನಕೇರಿ ಕ್ರಾಸ್ ಲಡ್ಡುಮುತ್ಯಾ ತಾತನವರು ಸಾನ್ನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಪ್ರಭು ಚವಡಿ ಮಾತನಾಡಿದರು. ಸಮಾರಂಭವನ್ನು ಸರ್ವ ಸಮಾಜದ ಹಿತರಕ್ಷಣಾ ಸಮಾಜದ ಅಧ್ಯಕ್ಷ ಚಂಬಣ್ಣ ಚವಡಿ ಉದ್ಘಾಟಿಸಿದರು.

ಐ.ಎಸ್. ಪಾಟೀಲ, ಮಿಥುನ ಪಾಟೀಲ, ಅಶೋಕ ಭಾಗಮಾರ, ವಿಶ್ವನಾಥ ಜಿಡ್ಡಿಬಾಗಿಲ, ವೀರಣ್ಣ ಶಿರೋಳ, ಬಸವಂತಪ್ಪ ಮೂಲಿಮನಿ, ರಾಜು ಪಲ್ಲೇದ, ಡಾ. ಕೆ.ವಿ. ಧನ್ನೂರ, ಪ್ರಭು ಮೇಟಿ, ಮುತ್ತಣ್ಣ ಮ್ಯಾಗೇರಿ, ಅಕ್ಷಯ ಬಂಡಿ, ಮಲ್ಲಿಕಾರ್ಜುನ ಹಿರೇಕೊಪ್ಪ, ಅಕ್ಷಯ ಪಾಟೀಲ, ಬಸವರಾಜ ಬಿದರೂರ, ಪ್ರಭು ಚವಡಿ, ಆರ್.ಜಿ. ಮಲ್ಲಾಪುರ, ಶಶಿಧರ ವಕ್ಕಲರ, ಜಗದೀಶ ಹೊಸಳ್ಳಿ, ವಿಜಯಲಕ್ಷ್ಮೀ ಕೋಟಿ, ಸುಮಿತ್ರಾ ತೊಂಡಿಹಾಳ. ಪುಷ್ಪಾ ಮ್ಯಾಗೇರಿ, ನಿರ್ಮಲಾ ಸಂಗನಾಳ, ಕಾವ್ಯಾ ಅಬ್ಬಿಗೇರಿ, ಶರಣಗೌಡ ಪಾಟೀಲ, ವೀರೇಶ ಸಂಗಮದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net