ಶಾಸಕ ನಾಗೇಂದ್ರ ಬಲಿಪಶುವಾಗಿ ಜೈಲುವಾಸ

Untitled design (3)
ಕೂಡ್ಲಿಗಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿದರು. ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಂಸದ ವೈ.ದೇವೇಂದ್ರಪ್ಪ, ಮಂಡಲ ಅಧ್ಯಕ್ಷ ಕೆ.ನಾಗರಾಜ, ದಿವಾಕರ ಇದ್ದರು.
Published on

ಕೂಡ್ಲಿಗಿ: ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರಗೆ 182 ಕೋಟಿ ರೂ. ಲೂಟಿ ಮಾಡುವಷ್ಟು ಶಕ್ತಿ ಇರಲಿಲ್ಲ. 20-30 ಕೋಟಿ ರೂ. ಬಳಸಿರಬಹುದು. ಆದರೆ, ವಾಲ್ಮೀಕಿ ನಿಗಮದ ಹಗರಣದಲ್ಲಿ ಬಲಿಪಶುವಾಗಿ ಜೈಲು ಸೇರಿದ್ದಾರೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಕುಹಕ ವಾಡಿದರು.

ಪಟ್ಟಣದ ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಅವರ ಮನೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ವಾಲ್ಮೀಕಿ ನಿಗಮದ ಹಗರಣ ಹಿಂದೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿ ಯಾರೆಲ್ಲ ಇದ್ದಾರೆ ಎಂಬುದು ತಿಳಿಯದಾಗಿದೆ. ಆದರೆ ಜೈಲು ಸೇರಿದ್ದು ಮಾತ್ರ ನಾಗೇಂದ್ರ. ಅವರನ್ನು ನೋಡಲು ಕಾಂಗ್ರೆಸ್‌ನ ಯಾವ ನೊಣವೂ ಹೋಗಲಿಲ್ಲ ಎಂದು ವ್ಯಂಗ್ಯವಾಡಿದ ಅವರು, ಬಳ್ಳಾರಿ ಲೋಕಸಭಾ ಚುನಾವಣೆಯ ಜತೆಗೆ ಗೋವಾ, ತೆಲಂಗಾಣ ಚುನಾವಣೆಯಲ್ಲಿಯೂ ಈ ಹಣ ಬಳಕೆಯಾಗಿದೆ. ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ಚುನಾವಾಣೆಗೆ ಬಳಸಿರುವುದರಿಂದ ತುಕಾರಾಮ್ ಅವರ ಸಂಸತ್ ಸದಸ್ಯತ್ವ ರದ್ದಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಕರುಣಾಕರ ರೆಡ್ಡಿ 2004ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಬಿಜೆಪಿ ಪ್ರಬಲವಾಗಿರಲಿಲ್ಲ. ಆಗ ಬಿಜೆಪಿ ಸೇರಿದ್ದ ಬಸವರಾಜೇಶ್ವರಿ ಅವರ ಜತೆ ಕೂಡ್ಲಿಗಿಗೆ ಬಂದು ಸಭೆ ನಡೆಸಲಾಯಿತು. ಈ ವೇಳೆ ಅನೇಕರು ಬಿಜೆಪಿ ಸೇರಿದ್ದರಿಂದ ಮಾರನೇ ದಿನವೇ ಕೂಡ್ಲಿಗಿ ಕ್ಷೇತ್ರಾದ್ಯಂತ ಬಿಜೆಪಿ ಬಾವುಟ ಹಾರಲು ಆರಂಭವಾಯಿತು. ಇದರಿಂದ ಕರುಣಾಕರ ರೆಡ್ಡಿ 35 ಸಾವಿರ ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಯಿತು. ಕೂಡ್ಲಿಗಿ ಕ್ಷೇತ್ರವೊಂದರಲ್ಲಿಯೇ 19 ಸಾವಿರ ಮತಗಳು ಮುನ್ನಡೆ ಬಂದಿತ್ತು ಎಂದು ಸ್ಮರಿಸಿದರು.

ನಾನು ಮಂತ್ರಿಯಾಗಿದ್ದಾಗ ಕೂಡ್ಲಿಗಿ ಕ್ಷೇತ್ರದ ಜನರಿಗೆ ಕುಡಿವ ನೀರಿಗಾಗಿ ನೂರಾರು ಕೋಟಿ ಅನುದಾನ ನೀಡಿದ್ದು, ಅನೇಕ ರಸ್ತೆಗಳು ಅಭಿವೃದ್ಧಿಪಡಿಸಲಾಗಿತ್ತು. ಬೆಂಗಳೂರು ಮತ್ತು ಬಳ್ಳಾರಿ ನಡುವೆ ಓಡಾಡಲು 20 ಕೋಟಿ ರೂ. ವೆಚ್ಚದ ಹೆಲಿಕಾಪ್ಟರ್ ತಗೆದುಕೊಂಡಿದ್ದೆ. ಇದರಿಂದ ಬೆಂಗಳೂರಿನಲ್ಲಿ ಕೆಲಸ ಮುಗಿಸಿಕೊಂಡು ಬಳ್ಳಾರಿಗೆ ಬಂದು ಜನರ ಸಮಸ್ಯೆ ಆಲಿಸಲು ಸಹಾಯವಾಗಿತ್ತು. ಆದರೆ, ಅದನ್ನು ಕೆಟ್ಟದ್ದಾಗಿ ಬಿಂಬಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅಭಿವೃದ್ಧಿ ಮಾಡುವ ಕನಸು ಹೊಂದಿದ್ದೆ. ಇದಕ್ಕೆಲ್ಲ ಮಣ್ಣು ಹಾಕಿದ್ದು ಕಾಂಗ್ರೆಸ್. ಇದಕ್ಕೆ ಅಡ್ಡಿಪಡಿಸಿದ್ದಕ್ಕೆ ಕೇಂದ್ರದಲ್ಲಿ 15 ವರ್ಷಗಳಿಂದ ಅಧಿಕಾರದಲ್ಲಿಲ್ಲ. ಇನ್ನೂ 50 ವರ್ಷವದರೆಗೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದರು. ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಂಸದ ದೇವೇಂದ್ರಪ್ಪ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೂರ್ಯಪಾಪಣ್ಣ, ಮಂಡಲ ಅಧ್ಯಕ್ಷ ಕೆ.ನಾಗರಾಜ, ಸಂಡೂರು ಕ್ಷೇತ್ರದ ದಿವಾಕರ, ತಾಲೂಕು ಮಹಿಳಾ ಕಾರ್ಯದರ್ಶಿ ಪವಿತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net