

ಮಂಡ್ಯ: ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿತರು ಒಂದೆಡೆ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿಯೂ ಆದ ಮಂಡ್ಯ ಆರ್ಗ್ಯಾನಿಕ್ ಸಂಸ್ಥಾಪಕ ಎಸ್.ಸಿ.ಮಧುಚಂದನ್ ಕೂಡ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಿರಂತರವಾಗಿ ಹಿತೈಷಿಗಳ ಸಭೆ ಮಾಡುತ್ತಿದ್ದು, ಅವರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಭಾನುವಾರ ನಗರದ ಗುತ್ತಲು ಬಡಾವಣೆಯ ನುಡಿಭಾರತಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಭೆಗೆ ಆಗಮಿಸಿದ್ದ ಹಿತೈಷಿಗಳು ಒಂದಷ್ಟು ಸಲಹೆ ನೀಡಿದ್ದಾರೆ. ಗಣಿಗಾರಿಕೆ ಸೇರಿದಂತೆ ಹಲವು ಹೋರಾಟ ಒಂದೆಡೆಯಾದರೆ, ಮಂಡ್ಯ ಆರ್ಗ್ಯಾನಿಕ್ ಮೂಲಕ ಯುವಕರಿಗೆ ಉದ್ಯೋಗದ ಜತೆಗೆ ಗ್ರಾಮೀಣ ಭಾಗದಲ್ಲಿ ಕೀರೆಮಡಿ ಮಹಿಳಾ ಒಕ್ಕೂಟವನ್ನು ಪ್ರಾರಂಭಿಸಿ ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ಮಹಿಳೆಯರು ಕೃಷಿ ಮೂಲಕ ಆರ್ಥಿಕ ಸಬಲರಾಗುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಶಕ್ತಿಗಾಗಿ ಚುನಾವಣಾ ಕಣಕ್ಕೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.