ಬೆಳಗಾವಿ ಬಿಜೆಪಿಯಲ್ಲಿ ಬಂಡಾಯ ಬೇಗುದಿ

Screenshot_2023-04-12-19-37-54-81.jpg
Published on

ಬೆಳಗಾವಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಟಿಕೆಟ್ ಕೈ ತಪ್ಪಿದ ಅಭ್ಯರ್ಥಿಗಳ ಬೆಂಬಲಿಗರ ಆಕ್ರೋಶ ಹೆಚ್ಚುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ, ರಾಮದುರ್ಗ, ಬೈಲಹೊಂಗಲ, ಬೆಳಗಾವಿ ಉತ್ತರ ಹಾಗೂ ಯಮಕನಮರಡಿಯಲ್ಲಿ ಟಿಕೆಟ್ ಕೈ ತಪ್ಪಿದ ಅಭ್ಯರ್ಥಿಗಳು ಬಂಡಾಯ ಏಳುತ್ತಿದ್ದಾರೆ.
ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಬೇಸರಗೊಂಡ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ಏ.14ರಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಬೈಲಹೊಂಗಲ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡ ಡಾ.ವಿಶ್ವನಾಥ ಪಾಟೀಲ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಅವರೊಂದಿಗೆ ಪಕ್ಷದ ಮಂಡಲ ಅಧ್ಯಕ್ಷ ಸೇರಿದಂತೆ 600ಕ್ಕೂ ಹೆಚ್ಚು ಸದಸ್ಯರು ಕೂಡ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಪಟ್ಟಣದಲ್ಲಿ ಬುಧವಾರ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಡಾ.ವಿಶ್ವನಾಥ, ಬಿಜೆಪಿ ಕಾರ್ಯಕರ್ತನಾಗಿ, ಜಿಲ್ಲಾ ಘಟಕದ ಆಧ್ಯಕ್ಷನಾಗಿ ಸಾಕಷ್ಟು ದುಡಿದಿದ್ದೇನೆ. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗ, ಅವರೊಂದಿಗೆ ಹೋಗಿ ಶಾಸಕನಾಗಿ ಸಾಮರ್ಥ್ಯ ತೋರಿಸಿದ್ದೇನೆ. ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಮತ್ತೆ ಬಿಜೆಪಿ ಬಂದಿದ್ದೆ. ಇಷ್ಟೆಲ್ಲ ವಿಶ್ವಾಸ ಇಟ್ಟಿದ್ದಕ್ಕಾಗಿ ನನಗೆ ಟಿಕೆಟ್ ಕೊಡಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ, ನಂಬಿದವರನ್ನು ಕೈ ಬಿಟ್ಟಿದ್ದಾರೆ ಎಂದು ದೂರಿದರು.
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಶಾಸಕ ಅನಿಲ ಬೆನಕೆ ಬದಲಿಗೆ, ಡಾ.ರವಿ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ಖಂಡಿಸಿ, ಬೆಳಗಾವಿ ರಾಣಿ ಚನ್ನಮ್ಮನ ವೃತ್ತದಲ್ಲಿ ಬೆನಕೆ ಬೆಂಬಲಿಗರು ಬುಧವಾರ ಪ್ರತಿಭಟಿಸಿದ್ದಾರೆ. ಅನಿಲ ಬೆನಕೆ ಉತ್ತರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಂಡಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್ ಅವರಿಗೆ ಟಿಕೆಟ್ ನೀಡದಿರುವುದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮದುರ್ಗದಲ್ಲಿ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಕಡೆಗಣಿಸಿ, ಕ್ಷೇತ್ರದ ಹೊರಗಿನ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ ಎಂದು ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಬುಧವಾರ ಶಾಸಕರ ಮನೆ ಮುಂದೆ ಜಮಾಯಿಸಿದ ಅಪಾರ ಸಂಖ್ಯೆಯ ಕಾರ್ಯಕರ್ತರು, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net