

ಮಂಡ್ಯ: ಶಾಲಾ-ಕಾಲೇಜಿನ ಎದುರು ನಿಂತು ಹೆಣ್ಣುಮಕ್ಕಳನ್ನು ಚುಡಾಯಿಸುವ ಪುಂಡರಿಗೆ ಲಾಠಿಯಿಂದ ಪಾಠ ಕಲಿಸಿ ಎಂದು ಶಾಸಕ ರವಿಕುಮಾರ್ ಗಣಿಗ ಸೂಚನೆ ನೀಡಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಒಂದು ಕೋಟಿ ರೂ ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ವಿದ್ಯಾರ್ಥಿನಿಯರ ಅಹವಾಲು ಆಲಿಸಿದರು. ಕಾಲೇಜಿನ ಸುತ್ತ ಯುವಕರ ಹಾವಳಿ ಹೆಚ್ಚಾಗಿದೆ. ವಿದ್ಯಾರ್ಥಿನಿಯರು ಓಡಾಡಲು ಕಷ್ಟವಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕ, ಪೊಲೀಸರು ಏನು ಮಾಡುತ್ತಿದ್ದೀರಿ. ಇಂತಹ ಪ್ರಕರಣ ಮರುಕಳಿಸಬಾರದು. ಕಾಲೇಜಿನ ಎದುರು ಕಾಲಕಳೆಯುವ ಯುವಕರಿಗೆ ಪಾಠ ಕಲಿಸಿ ಎಂದು ಸೂಚನೆ ನೀಡಿದರು.
ಬಳಿಕ ಕಾಲೇಜಿನ ಹೊರಗೆ ಬಂದು ಮೇಲ್ಸೆತುವೆ ಪರಿಶೀಲನೆ ನಡೆಸಿದ ರವಿಕುಮಾರ್ ಗಣಿಗ, ಅಲ್ಲಿ ಅಂಗಡಿಗಳನ್ನು ಹಾಕಿಕೊಂಡಿರುವವರಿಗೂ ಎಚ್ಚರಿಕೆ ನೀಡಿದರು. ಯುವಕರ ಗುಂಪು ಸೇರಿಕೊಂಡು ಯುವತಿಯರನ್ನು ಚುಡಾಯಿಸುವ ದೂರು ಬರುತ್ತಿವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ನಗರಸಭೆ ಸದಸ್ಯ ಶ್ರೀಧರ್ ಇತರರಿದ್ದರು.
ಸರ್‌ಎಂವಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಚಾಲನೆ: ಮಾಂಡವ್ಯ ವೃತ್ತಿಪರ ಛಾಯಾಚಿತ್ರ ಗ್ರಾಹಕರ ಸಂಘದಿಂದ ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎರಡು ದಿನದ ಕ್ರಿಕೆಟ್ ಪಂದ್ಯಾವಳಿಗೆ ಮಂಗಳವಾರ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಅಭಿರುಚಿಗೆ ತಕ್ಕಂತಹ ಕ್ರೀಡಾ ಮನೋಭಾವ ಇರಬೇಕು. ಯಾರು ಸೋಲುತ್ತಾರೋ, ಗೆಲ್ಲುತ್ತಾರೋ ಮುಖ್ಯವಲ್ಲ. ಬದಲಿಗೆ ಪ್ರತಿಯೊಬ್ಬರು ಭಾಗವಹಿಸುವುದು ಮುಖ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಸಮಾಜಸೇವಕ ಮಂಜು, ನಗರಸಭೆ ಸದಸ್ಯ ಶಿವಪ್ರಕಾಶ್, ಸಂಘದ ಅಧ್ಯಕ್ಷ ವಿನೋದ್‌ಗೌಡ, ಉಪಾಧ್ಯಕ್ಷ ಕಾರ್ತಿಕ್‌ಗೌಡ ಇತರರಿದ್ದರು.