

ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಗು ಹಾಸನ ಜಿಲ್ಲಾ ಗಡಿಭಾಗದಲ್ಲಿರುವ ಬೆಸೂರು-ಕಟ್ಟೆಪುರ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಹೇಮಾವತಿ ಪುನರ್ವಸತಿ ಯೋಜನೆಯಡಿ 88 ಲಕ್ಷ ರೂ. ವೆಚ್ಚದಲ್ಲಿ ಬೆಸೂರು ವೃತ್ತದಿಂದ ಕಟ್ಟೆಪುರ ಗ್ರಾಮದವರೆಗೆ ಸಂಪೂರ್ಣವಾಗಿ ಹದಗೆಟ್ಟಿದ್ದ ಉಳಿಕೆ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಿದ ಬಳಿಕ ಮಾತನಾಡಿ, ಬೆಸೂರು ಗ್ರಾಪಂ ಭಾಗದಲ್ಲಿ ಎಚ್‌ಆರ್‌ಪಿ ಯೋಜನೆಯಡಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಅವಕಾಶಗಳಿದ್ದು ಇದನ್ನು ಸದುಪಯೋಗ ಪಡಿಸಿಕೊಂಡು ಹಂತ ಹಂತವಾಗಿ ಅಭಿವೃದ್ಧಿ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾಮಗಾರಿಯ ಕ್ರಿಯಾ ಯೋಜನೆಯಂತೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು. ಕೆಲವು ಕಡೆ ರಸ್ತೆ ಮಾಡಿ ಚರಂಡಿ ಕಾಮಗಾರಿ ಮಾಡದ ಕಾರಣದಿಂದ ರಸ್ತೆಗಳು ಕಿತ್ತು ಹೋಗಿವೆ. ಕಾಮಗಾರಿ ಕ್ರಿಯಾ ಯೋಜನೆ ಸಿದ್ಧ ಮಾಡುವ ಸಂದರ್ಭ ಕಾಂಕ್ರೀಟ್ ಚರಂಡಿ ನಿರ್ಮಾಣವನ್ನು ಕಡ್ಡಾಯವಾಗಿ ಸೇರಿಸಿಕೊಂಡು ವ್ಯವಸ್ಥಿತವಾಗಿ ಕಾಮಗಾರಿ ಮಾಡುವಂತೆ ಇಂಜಿನಿಯರ್‌ಗಳಿಗೆ ತಾಕೀತು ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಬೆಸೂರು ಗ್ರಾಪಂ ಅಧ್ಯಕ್ಷೆ ಕಮಲಮ್ಮ, ಸದಸ್ಯರಾದ ರಾಮು, ಕಿಶನ್, ಗೌರಮ್ಮ, ದಯಾಕರ್ ಗ್ರಾಪಂ ಕಾರ್ಯದರ್ಶಿ ಆನಂದ್, ಬ್ಯಾಡಗೊಟ್ಟ ಗ್ರಾಪಂ ಅಧ್ಯಕ್ಷ ಮಹಮದ್ ಹನೀಫ್, ಸದಸ್ಯೆ ಪಾವನಾ, ಕೊಡ್ಲಿಪೇಟೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆರ್.ಚಂದ್ರಶೇಖರ್, ಪ್ರಮುಖರಾದ ತೇಜಕುಮಾರ್, ಶರತ್‌ಶೇಖರ್, ಚೇತನ್, ಮಲ್ಲೇಶ್, ಹಾಲಪ್ಪ, ಬೆಟ್ಟಪ್ಪ ಇಂಜಿನಿಯರ್‌ಗಳಾದ ಸಜಿತ್, ಹಾರೂನ್ ರಶೀದ್ ಹಾಜರಿದ್ದರು.