ಮಾದರಿ ಕ್ಷೇತ್ರ ಮಾಡುವ ಸಂಕಲ್ಪ: ಶಾಸಕ ರವಿಕುಮಾರ್ ಗಣಿಗ ವಿಶ್ವಾಸ

MLA drive for development work mandya
Published on

ಮಂಡ್ಯ: ಮಂಡ್ಯವನ್ನು ಮಾದರಿ ವಿಧಾನಸಭಾ ಕ್ಷೇತ್ರ ಮಾಡಲು ಸಂಕಲ್ಪ ನಮ್ಮದಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಅಭಿವೃದ್ದಿಗೆ ಚಾಲನೆ ನೀಡಿ ಮಾತನಾಡಿದ ಅವರು, 10 ಗ್ರಾಮಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಡಿ ಮನೆ ಮನೆಗಳಲ್ಲಿ ನಲ್ಲಿಗಳ ಮೂಲಕ ಶುದ್ದ ಕಾವೇರಿ ನೀರು ಕುಡಿಯಲು 7.5 ಕೋಟಿ ರೂಗಳನ್ನು ವೆಚ್ಚ ಮಾಡಲಾಗುತ್ತಿದೆ. ಎಚ್.ಕೋಡಿಹಳ್ಳಿ, ದೊಡ್ಡಗರುಡನಹಳ್ಳಿ, ಬೇಬಿ, ಕಾರೇಕಟ್ಟೆ, ತರಣಿಗೆರೆ, ಗುತ್ತಿಗಾನಹಳ್ಳಿ, ತಂಗಳಗೆರೆ, ಚಂದಗಾಲು, ಕಂಬದಹಳ್ಳಿ, ನರಗಲು ಗ್ರಾಮಗಳಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿ ಶುದ್ಧ ಕುಡಿಯುವ ನೀರು ಸರಬರಾಜು ಇನ್ನು 2 ತಿಂಗಳಲ್ಲಿ ಮುಗಿಯಲಿದೆ ಎಂದು ಭರವಸೆ ನೀಡಿದರು.

ಈ ಭಾಗದ ಹಲವಾರು ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿದೆ. 125 ಕೋಟಿ ರೂ ವೆಚ್ಚದ ಏತನೀರಾವರಿ ಯೋಜನೆಗೆ ಮುಂದಾಗಿದ್ದೇವೆ. ಹೇಮಾವತಿ ಭಾಗ ಮತ್ತು ಕೆಳಭಾಗಕ್ಕೆ ಆದ್ಯತೆ ನೀಡಲಾಗುವುದು. ಅದು ಈ ಬಜೆಟ್‌ನಲ್ಲಿ ಮಂಜೂರಾಗಲಿದೆ. ತಕ್ಷಣವೇ ಕಾಮಗಾರಿ ಆರಂಭವಾಗಲಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 25 ಕೋಟಿ ರೂಗಳಲ್ಲಿ ಗ್ರಾಮೀಣ ಮತ್ತು ಮಂಡ್ಯ ನಗರ ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. ಮುಂದಿನ 10 ದಿನದಲ್ಲಿ ನಗರದ ಮುಖ್ಯರಸ್ತೆಯನ್ನು 33 ಕೋಟಿ ರೂ ವೆಚ್ಚದಲ್ಲಿ ವಿಶ್ವದರ್ಜೆಯ ಪುಟ್‌ಪಾತ್ ಮತ್ತು ಚರಂಡಿ ನಿರ್ಮಾಣ, ಅತ್ಯುತ್ತಮವಾದ ಪಾದಚಾರಿ ರಸ್ತೆ ಆಗಲಿದೆ ಎಂದು ತಿಳಿಸಿದರು.

ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ತಾ.ಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಖಂಡ ಕಂಬದಹಳ್ಳಿ ಪುಟ್ಟಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net