ದ.ಕ ಜಿಲ್ಲೆಯಲ್ಲಿ ಕಾಂಗ್ರೇಸ್ ಪ್ರೇರಿತ ಗೂಂಡಾಗಿರಿ ಆರಂಭ

bharath
Published on

ಮಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರೇರಿತ ಗೂಂಡಾಗಿರಿ ಆರಂಭವಾಗಿದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೇಸ್ ಪ್ರೇರಿತ ಗೂಂಡಾಗಿರಿ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದೆ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಗೂಂಡಾಗಿರಿ ಅತಿರೇಕವಾಗಿತ್ತು. ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಕಡಿಮೆಯಾಗಿತ್ತು. ಇದೀಗ ಮತ್ತೆ ಶುರುವಾಗಿದೆ. ಐವನ್ ಡಿಸೋಜ ಮತ್ತವರ ತಂಡ ರಾಜಕೀಯ ಉಳಿವಿಗಾಗಿ ಮತ್ತು ಪ್ರಚಾರಕ್ಕಾಗಿ ಅತ್ಯಂತ ಹೀನ ಕೃತ್ಯವೆಸಗಿದ್ದಾರೆ. ಅವರ ವಿರುದ್ಧ ಪೊಲೀಸರು ಸುಮೋಟೋ ಕೇಸು ದಾಖಲಿಸಬೇಕು ಎಂದರು.

ಐವನ್ ಡಿಸೋಜಾ ಅವರು, ಬಾಂಗ್ಲಾ ರೀತಿಯ ಹೋರಾಟದ ಬಗ್ಗೆ ಮಾತನಾಡುವ ಮೂಲಕ ರಾಷ್ಟ್ರದ್ರೋಹವೆಸಗಿದ್ದಾರೆ. ಅವರ ತಂಡ ಬಸ್‌ಗೆ ಕಲ್ಲೆಸೆದು, ರಸ್ತೆಯಲ್ಲಿ ಟಯರ್ ಸುಟ್ಟು ಪ್ರತಿಭಟಿಸಿರುವುದು ಅಪಾಯಕಾರಿ ಬೆಳವಣಿಗೆಗೆ ಅಡಿಪಾಯ ಹಾಕಿಕೊಟ್ಟಂತಾಗಿದೆ. ಮುಂದೆ ವಿವಿಧ ಸಂಘ ಸಂಸ್ಥೆಗಳ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಬಸ್‌ಗೆ ಕಲ್ಲೆಸೆದು ಪ್ರತಿಭಟಿಸುವ ಮಟ್ಟಕ್ಕಿಳಿದರೆ ಪೊಲೀಸರು ಆಗಲೂ ಸುಮ್ಮನಿರುತ್ತಾರ? ಪೊಲೀಸರು ಅಂತಹ ಘಟನೆಗಳಿಗೆ ಎಡೆಮಾಡಿ ಕೊಡದೆ ಐವನ್ ವಿರುದ್ಧ ಕೇಸು ಹಾಕಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸ್ಪಷ್ಟ ಸಂದೇಶ ರವಾನಿಸಬೇಕು ಎಂದು ಭರತ್ ಶೆಟ್ಟಿ ಆಗ್ರಹಿಸಿದರು.

ಕಾಂಗ್ರೆಸ್‌ನ ಓರ್ವ ನಾಮನಿರ್ದೇಶಿತ ಸದಸ್ಯ, ಗ್ರಾಪಂ ಸದಸ್ಯ ಹಾಗೂ ಇನ್ನಿತರರು ಬಸ್‌ಗೆ ಕಲ್ಲೆಸೆದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಇಂತಹ ಗೂಂಡಾಗಳಿಗೆ ಮಣೆ ಹಾಕುತ್ತಿರುವುದು ವಿಪರ‌್ಯಾಸ. ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿಎಂ ವಿರುದ್ಧ ತನಿಖೆಯೇ ಮಾಡಬಾರದು ಎಂಬುದು ಕಾಂಗ್ರೆಸ್ ಆಗ್ರಹ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಕಾಂಗ್ರೆಸ್ ದುರಾಡಳಿತದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದರು.

ಬಿಜೆಪಿ ಪ್ರಮುಖರಾದ ಭರತ್ ರಾಜ್ ಕೃಷ್ಣಾಪುರ, ಸಂದೀಪ್ ಪಚ್ಚನಾಡಿ, ರಣ್‌ದೀಪ್ ಕಾಂಚನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net