

ಕೂಡ್ಲಿಗಿ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಉದ್ಯೋಗಕ್ಕಾಗಿ ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರ ಮುಖ್ಯ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ತಾಲೂಕು ಆಡಳಿತದವತಿಯಿಂದ ವಿದ್ಯಾರ್ಥಿಗಳಿಗೆ 371ಜೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹಿಂದುಳಿದ ಕೂಡ್ಲಿಗಿ ತಾಲೂಕಿನ ವಿದ್ಯಾರ್ಥಿಗಳಿಗೆ ತಾಲೂಕು ಆಡಳಿತ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಹಾಗೂ ಮುಂದೆ ಉದ್ಯೋಗಕ್ಕೆ ಮೀಸಲಾತಿ ಇರುವ ಕಾರಣ ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರವನ್ನು ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ಮಾಡಿ ಕಾಲೇಜಿನಲ್ಲಿ ಅರ್ಜಿ ಪಡೆದು ವಿತರಣೆ ಮಾಡಲಿದ್ದಾರೆ. ಇದರಿಂದ ಕಚೇರಿಗೆ ಅಲೆದಾಟ ತಪ್ಪಲಿದೆ ಎಂದರು.
ಮಾಹಿತಿ ಕೊರತೆ ಹಾಗೂ ಅಲೆದಾಟಕ್ಕೆ ಬೇಸತ್ತು 371ಜೆ ಪ್ರಮಾಣ ಪತ್ರ ತಗೆದು ಕೊಳ್ಳಲು ಹಿಂದೇಟು ಹಾಕುವುದು ತಪ್ಪಲಿದೆ. ಮಧ್ಯವರ್ತಿಗಳು ಹಾವಳಿ ಹಾಗೂ ಹಣ ಪೋಲು ಆಗುವುದಿಲ್ಲ. ಗ್ರೇಡ್-2 ತಹಸೀಲ್ದಾರ್ ಎಂ.ವಿ.ನೇತ್ರಾವತಿ ನೇತೃತ್ವದಲ್ಲಿ ತಾಲೂಕಿನ ಎಲ್ಲ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಅರ್ಜಿ ಪಡೆದರು ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಗ್ರೇಡ್-2 ತಹಸೀಲ್ದಾರ್ ಎಂ.ವಿ.ನೇತ್ರಾವತಿ ಮಾತನಾಡಿ, ಈಗಾಗಲೇ ಅಂದಾಜು 300 ಕ್ಕೂ ಹೆಚ್ಚು 371 ಜೆ ಪ್ರಮಾಣ ಪತ್ರ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸಪಪೂ ಕಾಲೇಜು ಪ್ರಾಚಾರ್ಯೆ ಟಿ.ಕೊತ್ಲಮ್ಮ, ಮುಖಂಡರಾದ ಢಾಣಿ ರಾಘವೇಂದ್ರ, ಟೋಪಿ ಸುರೇಶ್, ಕೆ.ಈಶಪ್ಪ, ದಿನಕರ, ಮಂಜುನಾಥ ಇತರರಿದ್ದರು.