

ಕುಶಾಲನಗರ: ಕಾವೇರಿ ನೀರಾವರಿ ನಿಗಮದ ವತಿಯಿಂದ 10 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಗುಮ್ಮನಕೊಲ್ಲಿ- ಹಾರಂಗಿ ಮಾರ್ಗದ ರಸ್ತೆ ಕಾಮಗಾರಿಯನ್ನು ಶುಕ್ರವಾರ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಪರಿಶೀಲಿಸಿದರು.
ತಾಂತ್ರಿಕ ಸಮಸ್ಯೆಯಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ ಅಪೂರ್ಣವಾದ ಕಾರಣ ವಾಹನ ಸವಾರರು ಪರದಾಡುತ್ತಿದ್ದು, ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಸ್ಥಳೀಯರು ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಗೋಪಾಲ್ ಸರ್ಕಲ್ನಿಂದ ಚಿಕ್ಕತ್ತೂರು ಗ್ರಾಮದವರೆಗೆ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವ ಸಮಸ್ಯೆಗಳ ನಿವಾರಣೆಗೆ ಶೀಘ್ರ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.
ಹಾರಂಗಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲು ನಿಗಮದ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ನೀರಾವರಿ ನಿಗಮ, ಸೆಸ್ಕ್, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಗೆ ತೆರಳಿ ಪರಿಶೀಲಿಸಿದ್ದು, ಸಮಸ್ಯೆ ಪರಿಹರಿಸಲು ಸೂಚಿಸಿದ್ದೇನೆ. ಈ ರಸ್ತೆಯಲ್ಲಿ ಮರಗಳ ತೆರವು, ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಕ್ರಮವಹಿಸುವಂತೆ ತಿಳಿಸಿದ್ದೇನೆ ಎಂದು ಶಾಸಕ ಮಂತರ್‌ಗೌಡ ತಿಳಿಸಿದರು.
ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ವಿಜಯನಗರಕ್ಕೆ ಭೇಟಿ ನೀಡಿದ ಶಾಸಕರು, ಅಲ್ಲಿನ ನಿವಾಸಿಗಳ ಅಹವಾಲು ಆಲಿಸಿದರು. ಕಾಲನಿಯಲ್ಲಿ 12 ಮನೆಗಳಿಗೆ ಸಂಬಂಧಿಸಿದಂತೆ ಜಾಗದ ವಿವಾದದ ಬಗ್ಗೆ ನಿವಾಸಿಗಳು ಶಾಸಕರ ಗಮನ ಸೆಳೆದರು. ಈ ಬಗ್ಗೆ ಪಿಡಿಒ ಸಂತೋಷ್ ಅವರಿಂದ ಶಾಸಕರು ಮಾಹಿತಿ ಪಡೆದುಕೊಂಡರು.
ಆರ್‌ಎಫ್‌ಒ ರತನ್‌ಕುಮಾರ್, ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ದೇವೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಸೆಸ್ಕ್‌ನ ವಿನಯ್, ಡಿಆರ್‌ಎಫ್‌ಒ ಅನಿಲ್ ಡಿಸೋಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕುಶಾಲನಗರ ಪುರಸಭೆ ಸದಸ್ಯ ಎಂ.ಕೆ.ದಿನೇಶ್, ಪ್ರಮುಖರಾದ ಗಿರೀಶ್, ಶಂಶುದ್ದೀನ್, ಫಿಲೋಮಿನಾ, ಗುತ್ತಿಗೆದಾರ ಕಿರಣ್ ಮತ್ತಿತರರು ಇದ್ದರು.