ಅಧಿಕಾರಿಗಳಿಗೆ ಶಾಸಕ ಡಾ. ಚಂದ್ರು ಲಮಾಣಿ ಶಿಸ್ತಿನ ಪಾಠ

CHANDRU LAMANI
Published on

ಶಿರಹಟ್ಟಿ: ಇಲಾಖೆಯ ಕಾರ್ಯವೈಖರಿ ಬಗ್ಗೆ ಉದಾಸೀನ ತೋರಿದ ಅಧಿಕಾರಿಗಳಿಗೆ ಶಾಸಕ ಡಾ. ಚಂದ್ರು ಲಮಾಣಿ ಶುಕ್ರವಾರ ಕರೆಯಲಾಗಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಶಿಸ್ತಿನ ಪಾಠ ಹೇಳಿದರು.

ಪಟ್ಟಣ ಪಂಚಾಯಿತಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದಡಿ ಕೈಗೊಂಡ ಪ್ರಗತಿ ಕಾಮಗಾರಿ ಮಾಹಿತಿ ನೀಡಲು ತಡವರಿಸಿದ ಪಪಂ ಮುಖ್ಯಾಧಿಕಾರಿ ಕಟ್ಟಿಮನಿ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ, ‘ಪಪಂ ಅಧ್ಯಕ್ಷರ ಅಧಿಕಾರದ ಅವಧಿ ಮುಗಿದಿದ್ದು ತಹಸೀಲ್ದಾರ್ ಆಡಳಿತಾಧಿಕಾರಿಯಾಗಿದ್ದಾರೆ.

ಸದರಿ ಕಾಮಗಾರಿಗೆ ಟೆಂಡರ್ ಕರೆದು 1ನೇ ದರ್ಜೆ ಗುತ್ತಿಗೆದಾರನಿಗೆ ಕೆಲಸ ನೀಡದೆ ಹಾಗೂ ಆಡಳಿತಾಧಿಕಾರಿ ಅನುಮೋದನೆ, ರುಜು ಪಡೆಯದೇ ಇಚ್ಛಾನುಸಾರ ಸಾಮಾನ್ಯ ಗುತ್ತಿಗೆದಾರನಿಗೆ ಕೆಲಸ ನೀಡಿದ್ದೀರಿ.

ಪಪಂ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು ಬಹುತೇಕ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆದಾಡಿ ಬೇಸತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣಕ್ಕೆ ನೀರು ಸರಬರಾಜು ವ್ಯವಸ್ಥೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ಬೋರ್‌ವೆಲ್ ಮೂಲಕ ನೀರು ಪೂರೈಸಲಾಗುತ್ತದೆ ಎಂದರು.

ಸಹನೆ ಕಳೆದುಕೊಂಡ ಶಾಸಕರು, ಅಧಿಕಾರದ ಅರಿವು ಇಟ್ಟುಕೊಂಡು ಮಾತನಾಡಿ ಹೊಳೆ ಇಟಗಿ ನದಿಯಿಂದ ಎಲ್‌ಆ್ಯಂಡ್‌ಟಿ ಮೂಲಕ ಶಿರಹಟ್ಟಿಗೆ ನೀರು ಬಿಡಲಾಗುತ್ತದೆ. ಇದರ ಅರಿವಾದರೂ ಇದೆಯಾ?.

ನಿಮ್ಮಂಥವರು ಮುಖ್ಯಾಧಿಕಾರಿಯಾದರೆ ಕಥೆ ಮುಗೀತು ಎಂದರು.
ಅಧಿಕಾರಿಗಳಿಗೆ ಸೂಚನೆ: ಇಲಾಖೆಯ ಪ್ರಗತಿ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಆಗಬೇಕು. ಜನರಿಂದ ದೂರು ಕೇಳಿ ಬಂದರೆ ಸಹಿಸುವುದಿಲ್ಲ. ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಇತರರು ಅನಗತ್ಯ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ.

ಅಧಿಕಾರಿಗಳು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಿ ಎಂದರು.

ಗೈರಾದವರ ವಿರುದ್ಧ ಕ್ರಮ

ಭೂಸೇನಾ ನಿಗಮ, ನಿರ್ಮಿತಿ ಕೇಂದ್ರ ಹಾಗೂ ಪಶುಸಂಗೋಪನೆ ಇಲಾಖೆ ವೈದ್ಯಾಧಿಕಾರಿ ಸಭೆಗೆ ಬಾರದೆ ತಮ್ಮ ಸಹಾಯಕರನ್ನು ಕಳಿಸಿದ್ದಕ್ಕೆ ಅಸಮಾಧಾನಗೊಂಡ ಜಿಪಂ ಯೋಜನಾಧಿಕಾರಿ ವಾಗೀಶ ಶಿವಾಚಾರ್ಯ, ‘ನಾವು ಕೇಳಿದ ಮಾಹಿತಿಗೆ ನಿಮ್ಮ ಬಳಿ ಉತ್ತರವಿದ್ದರೆ ಕುಳಿತುಕೊಳ್ಳಿ ಇಲ್ಲದಿದ್ದರೆ ಹೊರಗೆ ಹೋಗಿ’ ಎಂದು ಸೂಚನೆ ನೀಡಿದರು. ಮದ್ಯಪ್ರವೇಶಿಸಿದ ಶಾಸಕ ಡಾ. ಚಂದ್ರು, ಭೂಸೇನಾ ನಿಗಮ, ನಿರ್ಮಿತಿ ಕೇಂದ್ರದ ಅಧಿಕಾರಿಗಳ ಮುಖದರ್ಶನ ಆಗಿಲ್ಲ. ಸಭೆಯ ಮಹತ್ವ ಅವರಿಗೆ ತಿಳಿದಿಲ್ಲ ಎನಿಸುತ್ತದೆ. ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿಪಂ ಸಿಇಒ ಅವರಿಗೆ ಪತ್ರ ಬರೆಯಿರಿ. ನಾನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.

ರೈತರಿಗೆ ಸಕಾಲಕ್ಕೆ ಉಪಕರಣ ನೀಡಿ

ಸ್ಪ್ರಿಂಕ್ಲರ್ ಹಾಗೂ ಇತರೇ ಕೃಷಿ ಉಪಕಾರಣಗಳನ್ನು ಪಡೆಯಲು ಅರ್ಜಿ ಸಲ್ಲಿಸಿ ಹಣ ಭರಣ ಮಾಡಿದ ರೈತರಿಗೆ ಸಕಾಲಕ್ಕೆ ಉಪಕರಣ ನೀಡದೆ ಸರ್ಕಾರದ ಹಣ ದುರುಪಯೋಗವಾಗಿದ್ದರ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಹಿಂದಿನ ಸಭೆಯಲ್ಲೂ ಎಚ್ಚರಿಕೆ ನೀಡಿದ್ದರೂ ಮತ್ತೆ ಅದೇ ರೀತಿ ಮಾಡಲಾಗುತ್ತಿದೆ ಉದಾಸೀನ ಧೋರಣೆ ಅನುಸರಿಸಿದರೆ ಸಹಿಸುವುದಿಲ್ಲ ಎಂದು ಶಾಸಕ ಡಾ.ಚಂದ್ರು ಲಮಾಣಿ ಕೃಷಿ ಅಧಿಕಾರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net