

ಕುಮಟಾ: ತಾಲೂಕಿನ ಕತಗಾಲನಿಂದ ದೇವಿಮನೆ ಘಟ್ಟದವರೆಗೆ ಗ್ರಾಮೀಣ ಸಾರಿಗೆ ಬಸ್‌ನಲ್ಲಿ ತೆರಳಿದ ಶಾಸಕ ದಿನಕರ ಶೆಟ್ಟಿ ಅವರು ಬಸ್ ಪ್ರಯಾಣದಲ್ಲಿ ಸಾರ್ವಜನಿಕರಿಗೆ ಉಂಟಾಗುವ ಕಷ್ಟ ಹಾಗೂ ಹೊಂಡಗುಂಡಿಗಳ ರಸ್ತೆಯ ತೊಡಕಿನ ಕುರಿತು ಸ್ವತಃ ತಿಳಿದುಕೊಂಡರು.
ಕಳೆದ ಆರು ವರ್ಷಗಳಿಂದ ಕುಮಟಾ-ಶಿರಸಿ ರಸ್ತೆ ಕಾಮಗಾರಿ ನಡೆಯುತ್ತಿದೆ. ರಸ್ತೆ ಹದಗೆಟ್ಟಿದ್ದು, ದಿನದಿಂದ ದಿನಕ್ಕೆ ಪ್ರವಾಸಿಗರು ಮತ್ತು ಸ್ಥಳೀಯರ ಕಷ್ಟ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಶಾಸಕರು ಬಸ್‌ನಲ್ಲಿ ತೆರಳಿ ಖುದ್ದಾಗಿ ಜನರ ಸಮಸ್ಯೆ ಆಲಿಸಿದರಲ್ಲದೆ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಾಕರಸಾ ಅಧಿಕಾರಿಗಳು, ರಸ್ತೆ ನಿರ್ಮಾಣದ ಗುತ್ತಿಗೆ ಪಡೆದಿರುವ ಆರ್‌ಎನ್‌ಎಸ್ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.
ಆರ್‌ಎನ್‌ಎಸ್ ಕಂಪನಿಯ ನಿರ್ಲಕ್ಷ್ಯ ಹಾಗೂ ಹೆಚ್ಚಿನ ಕಾಲಾವಕಾಶದಲ್ಲಿಯೂ ಕಾಮಗಾರಿ ಪೂರ್ಣಗೊಳಿಸದ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆ ಕಾಮಗಾರಿ ವಿಳಂಬವು ಸಾರ್ವಜನಿಕರ ನಿತ್ಯದ ಜೀವನದ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ಗಜಾನನ ಪೈ, ರಾಜು ಭಟ್, ಮಹೇಶ ದೇಶಭಂಡಾರಿ ಇತರ ಪಂಚಾಯಿತಿ ಪ್ರತಿನಿಧಿಗಳು, ಇತರರು ಇದ್ದರು.
ಸಾರ್ವಜನಿಕರ ಮನವಿ ಮೇರೆಗೆ ಅಧಿಕಾರಿಗಳು, ಪಂಚಾಯಿತಿ ಪ್ರತಿನಿಧಿಗಳೊಂದಿಗೆ ತೆರಳಿ ಕಾಮಗಾರಿ ವೀಕ್ಷಿಸಿದ್ದೇನೆ. ಎರಡು ದಿನದಲ್ಲಿ ಗುತ್ತಿಗೆ ಕಂಪನಿ ಮುಖ್ಯಸ್ಥರು ಬರುವುದಾಗಿ ವಾಗ್ದಾನ ಮಾಡಿದ್ದಾರೆ. ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸುವತ್ತ ಆದ್ಯತೆ ನೀಡಲಾಗುವುದು. ದಿನಕರ ಶೆಟ್ಟಿ, ಶಾಸಕ