ಮಹಾಶಿವರಾತ್ರಿ ಯಶಸ್ಸಿಗೆ ಶಾಸಕ ದಿನಕರ ಶೆಟ್ಟಿ ಮೆಚ್ಚುಗೆ

2gkn1- SHIVARATRI
Published on

ಗೋಕರ್ಣ: ಜನತೆ ಒಮ್ಮನಸ್ಸಿನಿಂದ ಭೇದಭಾವ ಇಲ್ಲದೆ ಏಕತ್ರವಾಗಿ ಶ್ರಮಿಸಿದರೆ ಯಾವ ಮಹಾಕಾರ್ಯವೂ ಅಸಾಧ್ಯವಲ್ಲ. ಇದಕ್ಕೆ ಕೆಲವೇ ಕೆಲವು ದಿನಗಳಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ಸಂಘಟಿಸಿದ ಈ ವರ್ಷದ ಮಹಾಶಿವರಾತ್ರಿಯ ಗೋಕರ್ಣ ಉತ್ಸವ ಸಾರ್ವಕಾಲಿಕ ದಾಖಲೆಯಾಗಿ ಉಳಿಯಲಿದೆ ಎಂದು ಶಾಸಕ ದಿನಕರ ಶೆಟ್ಟಿ ನುಡಿದರು.

ಸರ್ಕಾರದ ಸಹಾಯದಲ್ಲಿ ಮಹಾಶಿವರಾತ್ರಿ ನಿಮಿತ್ತ ಆಯೋಜಿಸಲಾದ ಮೂರು ದಿನಗಳ ಗೋಕರ್ಣ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಗೋಕರ್ಣ ಶಿವರಾತ್ರಿ ವಿಶೇಷವಾಗಿ ಪೂಜೆ, ಪುನಸ್ಕಾರಗಳಿಗೆ ದೇಶದಲ್ಲಿಯೇ ಹೆಸರು ವಾಸಿಯಾಗಿದೆ. ಇಂತಹ ಪುರಾತನ ಯಾತ್ರಾ ಸ್ಥಳಕ್ಕೆ ಶಿವರಾತ್ರಿ ಆಚರಣೆಗಾಗಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತರಿಗಾಗಿ ಇದೇ ಮೊದಲ ಬಾರಿ ರಾಜ್ಯ ಸರ್ಕಾರದ ನೆರವಿನಿಂದ ಅಪರೂಪದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಧೈರ್ಯ ಮಾಡಲಾಯಿತು. ಈ ಮಹತ್ಕಾರ್ಯದಲ್ಲಿ ನಾನು ನಿಮಿತ್ತ ಮಾತ್ರ. ಕೇವಲ ಎರಡು ವಾರಕ್ಕೂ ಕಡಿಮೆ ಅವಧಿಯಲ್ಲಿ ಗೋಕರ್ಣದ ಉತ್ಸಾಹಿ ಕಾರ್ಯಕರ್ತರು ಶ್ರಮ ವಹಿಸಿ ನಾನು ಘೊಷಿಸಿದ ಗೋಕರ್ಣ ಉತ್ಸವದ ಆಶಯ ಸಫಲವಾಗುವ ಸರ್ವ ಪ್ರಯತ್ನ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಇಲ್ಲಿನ ಉದ್ಯಮಿಗಳು, ದಾನಿಗಳು ನಮ್ಮ ಊಹೆಗೂ ಮೀರಿ ತೆರೆದ ಹೃದಯದಿಂದ ಉದಾರವಾಗಿ ಧನ ಸಹಾಯ ನೀಡಿ ಉತ್ಸವದ ಯಶಸ್ಸಿಗೆ ಕಾರಣರಾದರು. ಈ ಉತ್ಸವಕ್ಕಾಗಿ ವಿಶೇಷವಾಗಿ ಹಣಕಾಸಿನ ಹೊಣೆಹೊತ್ತು ದುಡಿದ ಇಲ್ಲಿನ ಆನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ರಾಜಗೋಪಾಲ ಅಡಿ ಗುರೂಜಿ, ಶಿವಶಕ್ತಿ ಬ್ಯಾಂಕ್ ಅಧ್ಯಕ್ಷ ಪ್ರದೀಪ ನಾಯಕ, ಶ್ರೀ ಮಹಾಬಲೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ಬಿಜೆಪಿ ಜಿಲ್ಲಾ ಹಿಂದುಳಿದ ಘಟಕದ ಖಜಾಂಚಿ ಮಹೇಶ ಶೆಟ್ಟಿ ಮತ್ತಿತರರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಸಂಗಡ ವಿವಿಧ ಕೆಲಸಗಳನ್ನು ಮುಂದೆ ನಿಂತು ನೋಡಿಕೊಂಡ ಸ್ಥಳೀಯ ಪಂಚಾಯತಿ ಅಧ್ಯಕ್ಷೆ ಸುಮನಾ ಗೌಡ, ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ಗುತ್ತಿಗೆದಾರ ಗಣಪತಿ ಪಟಗಾರ, ಸಂದೀಪ ಅಗಸಾಲಿ, ತೇಜಸ್ವಿ ನಾಯ್ಕ, ಪವನ ಗುನಗ,ಪ್ರಭಾಕರ ಪ್ರಸಾದ ಮತ್ತಿತರರ ಸಹಕಾರ ಸ್ಮರಣೀಯವಾದುದಾಗಿದೆ ಎಂದರು.

ಪ್ರತಿ ವರ್ಷ ಇಂತಹ ಉತ್ಸವವನ್ನು ಶಿವರಾತ್ರಿಯಲ್ಲಿ ಸಂಘಟಿಸುವ ಉತ್ಸಾಹ ಇಲ್ಲಿನ ಜನರಲ್ಲಿ ಒಡಮೂಡುವಂತಾಗಿದೆ ಎಂದು ಸಮಾರಂಭ ಯಶಸ್ವಿಗೊಳಿಸಿದ ಎಲ್ಲರನ್ನು ಶಾಸಕರು ಅಭಿನಂದಿಸಿದರು. ಈ ವೇಳೆ ವೇದಿಕೆಯಲ್ಲಿ ರಾಜಗೋಪಾಲ ಅಡಿ ಗುರೂಜಿ, ಪ್ರದೀಪ ನಾಯಕ, ಮಹೇಶ ಶೆಟ್ಟಿ, ಮೋಹನ ನಾಯಕ, ಪಂಚಾಯತಿ ಮಾಜಿ ಅಧ್ಯಕ್ಷ ಮಂಜುನಾಥ ಜನ್ನು, ರಾಮು ಕೆಂಚನ್ ಹಾಗೂ ಉತ್ಸವದಲ್ಲಿ ವಿವಿಧ ರೀತಿಯಲ್ಲಿ ಶ್ರಮಿಸಿದ ಎಲ್ಲ ಪ್ರಮುಖರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net