

ಜಗಳೂರು: ಕೃಷಿಯಲ್ಲಿರುವ ಖುಷಿ, ಸಮಾಧಾನ, ಆರೋಗ್ಯ ಮತ್ತು ಆದಾಯ ಯಾವುದರಲ್ಲೂ ಇಲ್ಲ, ಆದರೆ ಇದಕ್ಕೆ ಶ್ರಮದ ಅವಶ್ಯಕತೆಯಿದೆ. ಭೂಮಿ ಬಂಗಾರ ಕೊಡುತ್ತದೆ ಎಂಬ ಮಾತಿನಲ್ಲಿ ನಿಜವಿದೆ. ಅದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರು ಬಿತ್ತನೆ ಕೈಗೊಳ್ಳುವಾಗ ಭೂಮಿಯಲ್ಲಿ ಅವಶ್ಯಕ ತೇವಾಂಶ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಬೀಜಗಳು ಸರಿಯಾಗಿ ಮೊಳಕೆಯೊಡೆಯದೇ ಉತ್ತಮ ಬೆಳೆ ಬರುವುದಿಲ್ಲ ಎಂದರು.
ಮುಂಗಾರು- ಹಿಂಗಾರು ಮಳೆಗಳು ಕೈ ಕೊಟ್ಟು ಅನೇಕ ಬಾರಿ ತಾಲೂಕು ಬರಗಾಲ ಕಂಡಿದೆ. ಆದರೆ ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ. ಸಿರಿಗೆರೆ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದದಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಸರ್ಕಾರ, ಮೂರು ಸಿಎಂ, ನೀರಾವರಿ ಸಚಿವರು, ಮೂರು ಶಾಸಕರ ಶ್ರಮದ ಫಲವಾಗಿ 57 ಕೆರೆಗಳಲ್ಲಿ ಶೇ.80 ರಷ್ಟು ನೀರು ಸಂಗ್ರಹವಾಗಿದೆ. ವಾಡಿಕೆಗಿಂತ ಮೊದಲು ಮುಂಗಾರು ಆರಂಭವಾಗಿದ್ದು ಬಿತ್ತನೆಗೆ ರೈತರು ಭೂಮಿ ಹದಗೊಳಿಸುತ್ತಿದ್ದಾರೆ. ಕೃಷಿ ಇಲಾಖೆ ಸಾಮಾನ್ಯ ವರ್ಗಕ್ಕೆ ಶೇ.50 ರಷ್ಟು ಮತ್ತು ಎಸ್ಸಿ-ಎಸ್ಟಿ ವರ್ಗಕ್ಕೆ ಶೇ.75 ರಷ್ಟು ಬಿತ್ತನೆ ಬೀಜದಲ್ಲಿ ಸಬ್ಸಿಡಿ ನೀಡುತ್ತಿದೆ. ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಎಚ್. ಶ್ವೇತಾ ಮಾತನಾಡಿ, ತಾಲೂಕಿನ ಬಿಳಿಚೋಡು, ಹೊಸಕೆರೆ ರೈತ ಸಂಪರ್ಕ ಕೇಂದ್ರಗಳಲ್ಲಿ, ಪಟ್ಟಣದ ಎಪಿಎಂ ಮತ್ತು ಬಿದರಕೆರೆ ಎಫ್ಪಿಒ ಕೇಂದ್ರದಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಿದ್ದು, ರೈತರು ಖರೀದಿಯಲ್ಲಿ ತೊಡಗಿದ್ದಾರೆ. ಈ ಬಾರಿ 38 ಸಾವಿರ ಹೆ. ಮೆಕ್ಕೆಜೋಳ, 4 ಸಾವಿರ ಹೆ. ರಾಗಿ, 4 ಸಾವಿರ ಹೆ. ತೊಗರಿ, 200 ಹೆ. ಸೂರ್ಯಕಾಂತಿ ಸೇರಿ ಅನೇಕ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲು ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ನಿವೃತ್ತ ಅಧಿಕಾರಿ ಬಿ.ಬಿ. ಮಹೇಶ್ವರಪ್ಪ, ತಾಪಂ ಮಾಜಿ ಅಧ್ಯಕ್ಷ ಸಣ್ಣಸೂರಪ್ಪ, ಮುಖಂಡರಾದ ಕಾಂತರಾಜು, ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್. ಚಿದಾನಂದ್, ಕೃಷಿ ಅಧಿಕಾರಿಗಳಾದ ಜೀವಿತಾ, ರೇಣುಕುಮಾರ್, ದೇವರಾಜ್, ಪಲ್ಲಾಗಟ್ಟೆ ಶೇಖರಪ್ಪ, ಗೌಸ್ಅಹಮದ್ ಸೇರಿ ಮತ್ತಿತರರಿದ್ದರು.