ಶಾಸಕ ದೇಶಪಾಂಡೆಗೆ ಸಕ್ಕರೆ ಕಾರ್ಖಾನೆ ಪ್ಯಾರಿ

MANAVI
Published on

ಹಳಿಯಾಳ: ಪಟ್ಟಣದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಕಾಮಧೇನು ಆಗಿದೆ ಹೊರತು ರೈತರಿಗಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಮರಾಠಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಅವರ ಪ್ರತಿಭಟನೆ ವೈಯಕ್ತಿಕ ಲಾಭಕ್ಕೋಸ್ಕರ ಎನ್ನುವ ರೀತಿಯಲ್ಲಿ ಶಾಸಕರು ಹೇಳಿಕೆ ನೀಡುತ್ತಿರುವುದು ಖಂಡನೀಯವಾಗಿದೆ ಎಂದರು.

ಶಾಸಕರು ಕಾರ್ಖಾನೆಯ ಪರವಾಗಿ ಮಾತನಾಡುತ್ತಿರುವುದನ್ನು ನೋಡಿದರೆ ಇವರಿಗೆ ರೈತರ ಮೇಲಿನ ಕಾಳಜಿ ಜಗಜ್ಜಾಹೀರಾಗುತ್ತಿದೆ. ಅವರ ವಯಸ್ಸಿಗೆ ಇದು ಶೋಭೆ ತರುವಂಥದ್ದಲ್ಲ. ಇವರಲ್ಲಿ ಏನು ನೋಡಿಕೊಂಡು ಒಳ್ಳೆಯ ಸಂಸದೀಯ ಪಟು ಪ್ರಶಸ್ತಿ ನೀಡಿದ್ದಾರೆ ಎಂದು ತಿಳಿಯುತ್ತಿಲ್ಲ. ಇದು ಈ ನಾಡಿನ ಎಲ್ಲ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ ಎಂದು ದೂರಿದರು.

ಹಿರಿಯ ಮುಖಂಡ ಎನ್.ಎಸ್. ಜಿವೋಜಿ ಮಾತನಾಡಿ, ಕಬ್ಬು ಬೆಳೆಗಾರ ಸಂಘದವರು ರೈತರ ಪರವಾಗಿನ ಹೋರಾಟಕ್ಕೆ ಯಾರಿಂದಲೂ ನಯಾ ಪೈಸೆ ಹಣ ಪಡೆದಿಲ್ಲ ಈ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿದ್ಧ ಎಂದಿದ್ದಾರೆ.

ಕಾರ್ಖಾನೆ ಕಾಮಧೇನು ನಿಜ, ಆದರೆ, ರೈತರು ಯಾರು ? ಇವರ ಗುಲಾಮರೇ? ಆ ರೈತನಿಗೆ ಗೌರವ ನೀಡಬೇಕು. ಅವನ ದುಡಿಮೆಗೆ ತಕ್ಕ ಬೆಲೆ ನೀಡಬೇಕು. ಇಂತಹ ನ್ಯಾಯೋಚಿತ ಹಕ್ಕನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘ ಕೇಳುತ್ತಿದೆ. ಇದು ತಪ್ಪಾ?, ಎಚ್​ಟಿ. ರೂ. 893 ತೀರಾ ಹೆಚ್ಚು ಮತ್ತು ಅದರ ಜೊತೆ ಲಗಾಣಿ ನೀಡಬೇಕು. ಇದು ಅತಿಯಾಯಿತು ಎಂದು ಅಧಿಕಾರಿಗಳನ್ನೊಳಗೊಂಡು ಎಲ್ಲರೂ ಹೇಳಬೇಕಾದರೆ, ಇದು ಶಾಸಕರಿಗೆ ಯಾಕೆ ಸಹಿಸಲು ಆಗುತ್ತಿಲ್ಲ?, ಕಾರ್ಖಾನೆ ಮೇಲೆ ಕುರುಡು ಪ್ರೇಮವೇ? ಅಥವಾ ಅದರಲ್ಲಿಯೂ ಪಾಲಿದೆಯೇ? ಎಂದು ಪ್ರಶ್ನೆಗಳ ಸುರಿಮಳೆಗೈದ ಜಿವೋಜಿ, ತಮ್ಮ ಎಲ್ಲ ಅಧಿಕಾರ ಬಳಸಿ ಕಾರ್ಖಾನೆಗೆ ಅಭಯ ನೀಡುವ ಶಾಸಕ ದೇಶಪಾಂಡೆ ಅವರಿಗೆ ಮತ ನೀಡಿದ ಮತದಾತರ (ರೈತರ) ಕಾಳಜಿ ಇಲ್ಲವೇ ಎಂದು ಕಿಡಿಕಾರಿದರು.

ಕಳೆದ ವರ್ಷದ ಹೋರಾಟದ ಫಲವಾಗಿ ಇವತ್ತು ನಮ್ಮ ಕಬ್ಬಿನ ಬೆಲೆ ರೂ. 2826 ಆಗಿದೆ. ಕಳೆದ ವರ್ಷದ ಬೆಲೆ ರೂ. 2371 ಹೋಲಿಸಿದರೆ ರೂ. 455 ಪ್ರತಿ ಟನ್ ಹೆಚ್ಚಾಗಿಲ್ಲವೇ?. ಇದು ರೈತರಿಗೆ ಲಾಭವಲ್ಲವೇ? ಇದರ ಜೊತೆ ರೂ. 150 ಪ್ರತಿ ಟನ್ ದರ ಏರಿಸಿ ನೀಡಿದ್ದು ಮತ್ತು ಸರ್ಕಾರ ಘೊಷಿಸಿದ ರೂ. 150 ಕಾರ್ಖಾನೆ ನೀಡಬೇಕಾದ ಬಾಕಿ ಇದ್ದು, ಇದೆಲ್ಲ ಹೋರಾಟದಿಂದ ಆಗಿದೆ ಎಂಬುದನ್ನು ಶಾಸಕರು ತಿಳಿದಿಲ್ಲವೇ ಎಂದು ವ್ಯಂಗ್ಯವಾಡಿದರು.

ಶಾಸಕ ದೇಶಪಾಂಡೆ ಅವರಿಗೆ ಅನ್ನದಾತರ ಮೇಲೆ ನಿಜವಾಗಿ ಕಾಳಜಿ ಇದ್ದರೆ ಕೂಡಲೇ ಇಐಡಿ ಕಾರ್ಖಾನೆ ಅವರನ್ನು ಮತ್ತು ಹೋರಾಟಗಾರರನ್ನು ಕರೆಸಿ ತಮ್ಮ ಮಧ್ಯಸ್ಥಿಕೆಯಲ್ಲಿ ಸಮಸ್ಯೆಗಳನ್ನು ಪರಿಹರಿಸಲಿ ತೋರಿಸಲಿ ಎಂದು ಸವಾಲು ಹಾಕಿದರು. ಪುಂಡಲೀಕ ಗೊಡಿಮನಿ, ಸುನೀಲ ಪಾಟೀಲ, ಸುರೇಶ ಶಿವಣ್ಣವರ, ಜಿಡಿ ಗಂಗಾಧರ, ಮಹೇಶ ಪಾಲೇಕರ ಇದ್ದರು.

ರೈತರ ನ್ಯಾಯಯುತ ಬೇಡಿಕೆ ಈಡೇರಿಸಿ

ಹಳಿಯಾಳ: ಹಳೆಯ ಬಾಕಿ ಪಾವತಿ, ಕಟಾವು ಮತ್ತು ಸಾಗಣೆ (ಎಚ್​ಟಿ) ದರ ಕಡಿಮೆ ಪರಿಷ್ಕರಣೆ ಮಾಡುವುದು ಸೇರಿ ರೈತರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ದಲಿತ ಸಂಘರ್ಷ ಸಮಿತಿ ಕೆಂಪು ಸೇನೆ ಸಂಘಟನೆ ಆಗ್ರಹಿಸಿದೆ.

ಸಂಘಟನೆಯ ಉತ್ತರ ಕರ್ನಾಟಕ ಅಧ್ಯಕ್ಷ ವಿ.ಬಿ. ರಾಮಚಂದ್ರ ಅವರ ನೇತೃತ್ವದಲ್ಲಿ ಪಟ್ಟಣದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ತೆರಳಿ ಕಬ್ಬು ವಿಭಾಗದ ಅಧಿಕಾರಿ ತುಕಾರಾಮ ಪಾಟೀಲ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. 2023-24ನೇ ಸಾಲಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿ ಬರಗಾಲ ಆವರಿಸಿದೆ. ರೈತರಿಗೆ ಗೊಬ್ಬರ, ಲೇಬರ್ ಖರ್ಚು, ಯಂತ್ರೋಪಕರಣಗಳ ಖರ್ಚು, ಹೀಗೆ ಅನೇಕ ಖರ್ಚುಗಳು ಜಾಸ್ತಿಯಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಕಬ್ಬಿ ಇಳುವರಿ ತೀರಾ ಕುಂಠಿತವಾಗಿದೆ. ಹೀಗಾಗಿ ಎಚ್.ಎನ್.ಟಿ ರೇಟಿನಲ್ಲಿ ಕಡಿಮೆ ಮಾಡಿ ಅದೇ ಹಣ ರೈತರಿಗೆ ನೀಡಬೇಕು, ಲಗಾಣೆ ತೆಗೆದುಕೊಳ್ಳದೆ ರೈತರ ಕಬ್ಬನ್ನು ಕಾರ್ಖಾನೆಗೆ ಕಟಾವು ಮಾಡಿಕೊಂಡು ಬರಬೇಕೆಂದು ಆಗ್ರಹಿಸಲಾಗಿದೆ. ಸಂಘಟನೆಯ ತಾಲೂಕು ಕಾರ್ಯದರ್ಶಿ ರಾಜು ಕುರುಬರು, ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ ಅಂಬೊಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net