ಜಿಲ್ಲಾಡಳಿತದ ಆದೇಶ ರೈತರಿಗೆ ನಷ್ಟ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬೇಸರ

MLA Darshan Puttannaiah press conference Mandya
Published on

ಮಂಡ್ಯ: ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬಿಗೆ 16 ತಿಂಗಳಾಗುತ್ತಿದೆ. ಹೀಗಿರುವಾಗ ಮೈಷುಗರ್ ವ್ಯಾಪ್ತಿಯ ಕಬ್ಬನ್ನು ಬೇರೆ ಕಾರ್ಖಾನೆಗೆ ಸಾಗಿಸಲು ಅವಕಾಶ ನೀಡದಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಕಬ್ಬು ಸರಬರಾಜು ಮಾಡಲು ಅನುಮತಿ ಕೊಡಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಒತ್ತಾಯಿಸಿದರು.

ಸರಿಯಾದ ಸಮಯದಲ್ಲಿ ಕಬ್ಬು ಕಟಾವು ಮಾಡದ ಪರಿಣಾಮ ಅವಧಿ ಮೀರುತ್ತಿದೆ. ಈ ಬಗ್ಗೆ ಜಿಲ್ಲಾಡಳಿತವನ್ನು ಕೇಳಿದರೆ ಆಳುಗಳ ಸಮಸ್ಯೆ ಎನ್ನುತ್ತಿದೆ. ಅತ್ತ ಖಾಸಗಿ ಕಾರ್ಖಾನೆಯವರಿಂದ ಆಳುಗಳನ್ನು ಕರೆಸಿ ಕಬ್ಬು ಕಟಾವು ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದಾಗ್ಯೂ ಸಮಸ್ಯೆ ಬಗೆಹರಿದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಮೈಷುಗರ್ ವ್ಯಾಪ್ತಿಯ ಕಬ್ಬನ್ನು ಬೇರೆ ಕಾರ್ಖಾನೆ ತೆಗೆದುಕೊಳ್ಳದಂತೆ ಜಿಲ್ಲಾಡಳಿತದಿಂದ ಆದೇಶ ಹೊರಡಿಸಲಾಗಿದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ರೈತರಿಗೆ ಅನುಕೂಲವಾಗುವಂತೆ ಯಾವ ಕಾರ್ಖಾನೆಯವರು ಸೌಲಭ್ಯ ಕಲ್ಪಿಸುತ್ತಾರೋ ಅಲ್ಲಿಗೆ ಕಬ್ಬು ಸರಬರಾಜು ಮಾಡಲು ಅವಕಾಶ ಕೊಡಬೇಕು. ಈ ಕುರಿತು ಜಿಲ್ಲಾಡಳಿತ ತುರ್ತು ಆದೇಶ ಹೊರಡಿಸಬೇಕು. ಇನ್ನು ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗುವುದು. ಇದಲ್ಲದೆ ಹೆಚ್ಚು ಕೂಲಿ ಕೊಡುತ್ತಿರುವುದರಿಂದ ಸ್ಥಳೀಯ ಕೂಲಿಯಾಳು ಕೂಡ ಕಬ್ಬು ಕಟಾವು ಮಾಡಲು ಮುಂದಾಗಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ಇನ್ನು ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆಗೆ ಸಂಬಂಧಿಸಿದಂತೆ 36 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಆರೋಗ್ಯ ಇಲಾಖೆಗೆ ಧನ್ಯವಾದ ತಿಳಿಸುತ್ತೇನೆ. ಒಂದು ವರ್ಷದ ಹಿಂದೆ ದುದ್ದ ಹೋಬಳಿಯಲ್ಲಿ ಭ್ರೂಣ ಪತ್ತೆ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಬೇರೆ ತಾಲೂಕಿಗೂ ವಿಸ್ತರಣೆಯಾಗಿರುವುದು ಗೊತ್ತಾಯಿತು. ಆರೋಪಿಗಳು ರಾಜ್ಯದ ಬೇರೆ ಜಿಲ್ಲೆಗಳಲ್ಲೂ ಕೃತ್ಯ ಎಸಗಿರುವುದು ಹೊರಗೆ ಬಂದಿದೆ. ಆದರೆ ಭ್ರೂಣ ಪತ್ತೆ ತಡೆ ಕಾರ್ಯಾಚರಣೆಯನ್ನು ಇಷ್ಟಕ್ಕೆ ಸೀಮಿತಗೊಳ್ಳುವುದು ಬೇಡ. ಬರಲಿಗೆ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೆಣ್ಣು ಹಾಗೂ ಗಂಡಿನ ಸರಾಸರಿ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುವುದರ ಜತೆಗೆ ಸಮಸ್ಯೆ ಉದ್ಭವವಾಗಲಿದೆ. ಇದಕ್ಕೆ ಇಂದಿನಿಂದಲೇ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ಸರ್ಕಾರ ಪ್ರತ್ಯೇಕ ತಂಡ ರಚನೆ ಮಾಡಿ ಭ್ರೂಣ ಪತ್ತೆ ತಡೆ ಕಾರ್ಯಾಚರಣೆಯನ್ನು ರಾಜ್ಯಾದ್ಯಂತ ಮಾಡಬೇಕು ಎಂದು ಸಲಹೆ ನೀಡಿದರು.

ರಾಜ್ಯಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬರುತ್ತಿಲ್ಲ. ಪರಿಣಾಮ ಅಭಿವೃದ್ಧಿ ಕೆಲಸ ಕುಂಠಿತವಾಗುತ್ತಿದೆ. ಬೊಕ್ಕಸದಲ್ಲಿ ಹಣವಿಲ್ಲ ಪರಿಣಾಮ ಅನುದಾನ ಬಿಡುಗಡೆಯಾಗುತ್ತಿಲ್ಲ. ಆದರೆ ಜನರ ಬಳಿ ಹೋದಾಗ ಅಭಿವೃದ್ಧಿ ಕೆಲಸ ಏನು ಎಂದು ಪ್ರಶ್ನಿಸುತ್ತಾರೆ. ಒಂದೂವರೆ ವರ್ಷವಾದರೂ ರಸ್ತೆ, ಚರಂಡಿ ಆಗಲಿಲ್ಲ ಎನ್ನುತ್ತಾರೆ. ಈ ಬಗ್ಗೆ ಶಾಸಕರ ಸಭೆಯಲ್ಲೂ ಚರ್ಚೆಯಾಗುತ್ತಿರುತ್ತದೆ. ಆದ್ದರಿಂದ ಗ್ಯಾರಂಟಿ ಯೋಜನೆ ಎಷ್ಟರಮಟ್ಟಿಗೆ ತಲುಪುತ್ತಿದೆ ಎನ್ನುವುದರ ಬಗ್ಗೆ ಪರಾಮರ್ಶೆ ಆಗಬೇಕು. ಸರ್ವೇ ಮಾಡಿದರೆ ಏನು ಆಗುತ್ತಿದೆ ಎನ್ನುವ ಖಚಿತ ಮಾಹಿತಿ ಸಿಗಲಿದೆ. ಜತೆಗೆ ಅಂಕಿ ಅಂಶವೂ ತಿಳಿಯುತ್ತದೆ. ಬಳಿಕ ಪುನರ್ ಪರಿಶೀಲನೆ ಮಾಡಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದರು.

ರೈತ ಸಂಘವನ್ನು ಗ್ರಾಮ ಮಟ್ಟದಿಂದ ಸದೃಢಗೊಳಿಸಬೇಕು. ಅಧ್ಯಯನ ಶಿಬಿರ ಆಯೋಜಿಸಬೇಕು. ಆದರೆ ರೈತ ಪರ ಸಂಘಟನೆಗಳು ಇಬ್ಭಾಗವಾಗಿವೆ. ಆದ್ದರಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸರ್ಕಾರದ ವಿರುದ್ಧ ಪ್ರಶ್ನೆ ಮಾಡಬೇಕು. ಎಲ್ಲ ಸಂಘಟನೆಗಳು ರೈತರ ಪರವಾದ ಬೇಡಿಕೆಯನ್ನೇ ಮುಂದಿಟ್ಟು ಹೋರಾಟ ಮಾಡುತ್ತವೆ. ಅದೇ ಎಲ್ಲರೂ ಒಗ್ಗೂಡಿ ಹೋರಾಟ ಮಾಡಿದರೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net