

ಮಂಡ್ಯ: ರೈತ ನಾಯಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ 75ನೇ ವರ್ಷದ ಜನ್ಮದಿನ, ಸಂಸ್ಮರಣೆ ಹಾಗೂ ಕಾಟೇರ ಚಿತ್ರತಂಡಕ್ಕೆ ಅಭಿನಂದನಾ ಸಮಾರಂಭವನ್ನು ಜ.26ರಂದು ಪಾಂಡವಪುರದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಜ.23ರಂದು ಕೆ.ಎಸ್.ಪುಟ್ಟಣ್ಣಯ್ಯ ಜನ್ಮದಿನ. ಆದರೆ, ಅಂದು ರಾಯಚೂರಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಪಾಂಡವಪುರದಲ್ಲಿ 26ರಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು ಭೂ ಸುಧಾರಣಾ ಕಾಯ್ದೆ ಹಾಗೂ ಉಳುವವನೇ ಭೂಮಿಯ ಒಡೆಯ ಕಾನೂನು ಬಗ್ಗೆ ಕಾಟೇರ ಸಿನಿಮಾ ಬೆಳಕು ಚೆಲ್ಲುವ ಕೆಲಸ ಮಾಡಿದ್ದು, ರೈತರಿಗೆ ಮತ್ತು ಜನರಿಗೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ದರ್ಶನ್ ತೂಗುದೀಪ್ ಸೇರಿದಂತೆ ಚಿತ್ರತಂಡದ ಸದಸ್ಯರನ್ನು ಅಂದು ಸಮಾರಂಭದಲ್ಲಿ ಅಭಿನಂದಿಸಲಾಗುವುದು. ಪಾಂಡವ ಕ್ರೀಡಾಂಗಣದಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮ ರಾತ್ರಿ 10 ಗಂಟೆವರೆಗೆ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಲಿಂಗಪ್ಪಾಜಿ, ವಿಜಯ್‌ಕುಮಾರ್, ಶಿವಳ್ಳಿ ಚಂದ್ರು, ಹರವು ಪ್ರಕಾಶ್, ಜಿ.ಎ.ಶಂಕರ್ ಹಾಜರಿದ್ದರು.