

ಮಂಡ್ಯ: ದೆಹಲಿನಲ್ಲಿ ಪಿಆರ್‌ಎಸ್ ರಿಸರ್ಚ್ ಸಂಸ್ಥೆಯಿಂದ ದೇಶದ ಎಲ್ಲ ವಿಧಾನಸಭಾ ಸದಸ್ಯರಿಗೆಂದು ಆಯೋಜಿಸಿದ್ದ ಕೌಶಲ, ಉದ್ಯೋಗ ಸೇರಿದಂತೆ ಹಲವು ವಿಷಯದ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪಾಲ್ಗೊಂಡು ಕೆಲ ಮಹತ್ವದ ಮಾಹಿತಿ ಹಂಚಿಕೊಂಡು ಗಮನಸೆಳೆದಿದ್ದಾರೆ.
ಭಾರತದ ಆರ್ಥಿಕತೆಗೆ ಮಧ್ಯಮ ಕೈಗಾರಿಕೆಗಳ ಕೊಡುಗೆ ಮತ್ತು ಮಧ್ಯಮ ಕೈಗಾರಿಕೆಗಳಿಂದ ಉದ್ಯೋಗ ಸೃಷ್ಟಿಸುವಲ್ಲಿ ಶಾಸಕರ ಪಾತ್ರದ ಕುರಿತಾಗಿ ಸವಿಸ್ತಾರವಾಗಿ ಚರ್ಚಿಸಲಾಯಿತು. ದೇಶದ ಎಲ್ಲ ವಿಧಾನಸಭಾ ಸದಸ್ಯರಿಗೆ ಅವಕಾಶ ನೀಡಿದ್ದರೂ 85 ಜನ ಶಾಸಕರು ಪಾಲ್ಗೊಂಡಿದ್ದರು. ಈ ಪೈಕಿ ಕರ್ನಾಟಕದಿಂದ ಆರು ಶಾಸಕರ ಪೈಕಿ ದರ್ಶನ್ ಪುಟ್ಟಣ್ಣಯ್ಯ ಕೂಡ ಇದ್ದರು. ಎರಡು ದಿನದ ಶಿಬಿರದಲ್ಲಿ ಹಲವು ಪ್ರಮುಖ ವಿಷಯದ ಬಗ್ಗೆ ಚರ್ಚೆ ನಡೆದಿದೆ.
ಕೇಂದ್ರ ಸಚಿವ ಜಯಂತ್ ಚೌಧರಿ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಕುರಿತು ತರಬೇತಿ ನೀಡಿದರು. ಇದಲ್ಲದೆ ವಿವಿಧೆಡೆಯಿಂದ ಪ್ರತಿಷ್ಠಿತ ಸಂಸ್ಥೆ ಹಾಗೂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಶಾಸಕರಿಗೆ ಮಾಹಿತಿ ನೀಡಿದರು. ಮುಖ್ಯವಾಗಿ ದೇಶದ ಆರ್ಥಿಕತೆಯಲ್ಲಿ ಯಾವ ಕ್ಷೇತ್ರ ಎಷ್ಟು ಪಾಲುದಾರಿಕೆ ಹೊಂದಿದೆ. ಕೃಷಿ, ಸ್ವಯಂ ಉದ್ಯೋಗ, ಕೂಲಿ, ಕಾರ್ಪೋರೆಟ್ ಸೇರಿದಂತೆ ವಿವಿಧ ವಲಯದ ಬಗ್ಗೆ ಮಾಹಿತಿ ನೀಡಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯಮ ಕೈಗಾರಿಕೆಗಳ ಸೃಷ್ಟಿ, ಉದ್ಯೋಗ ಸೃಷ್ಟಿ, ಆರ್ಥಿಕ ಸದೃಢತೆ ಬಗ್ಗೆ ವಿವರಣೆ ಕೊಡಲಾಯಿತು.
ಶಿಬಿರದಲ್ಲಿ ದರ್ಶನ್ ಪುಟ್ಟಣ್ಣಯ್ಯ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿನೂತನ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅದೆಂದರೆ ಪ್ರತಿ ಮನೆಯಲ್ಲಿ ಸರ್ವೇ ಮಾಡುವುದು. ಅದರಂತೆ ಪ್ರತಿ ಮನೆಗೂ ತಂಡ ಭೇಟಿ ನೀಡಿ ಆ ಕುಟುಂಬದ ಆರ್ಥಿಕ ಪರಿಸ್ಥಿತಿ, ಕೃಷಿ ಅಥವಾ ಹೈನುಗಾರಿಕೆ ಪದ್ಧತಿ, ಉದ್ಯೋಗದ ಅವಶ್ಯಕತೆ ಸೇರಿದಂತೆ ಎಲ್ಲ ಮಾಹಿತಿ ಕಲೆ ಹಾಕುತ್ತಿರುವುದು. ಈ ಮಾಹಿತಿ ಆಧಾರದ ಮೇಲೆ ಯೋಜನೆ ರೂಪಿಸುವುದು. ಉದಾಹರಣೆಗೆ ಒಂದು ಗ್ರಾಮವನ್ನು ಪ್ರಾಯೋಗಿಕವಾಗಿ ತೆಗೆದುಕೊಂಡಾಗ ಅಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ, ವ್ಯಾಸಂಗಕ್ಕೆ ಯಾವ ಊರಿಗೆ ಹೋಗುತ್ತಾರೆನ್ನುವುದನ್ನು ನೋಡಿದಾಗ ಆ ಹಳ್ಳಿಗೆ ಅಗತ್ಯವಿರುವ ಬಸ್ ಸೌಲಭ್ಯವನ್ನು ಮುಂದಿನ ಹಂತದಲ್ಲಿ ಒದಗಿಸುವುದು. ಕೃಷಿ ಪದ್ಧತಿಯಲ್ಲಿನ ಬದಲಾವಣೆ, ಮಣ್ಣಿನ ಪರೀಕ್ಷೆ ಸೇರಿದಂತೆ ಪ್ರತಿ ವಿಷಯದಲ್ಲಿಯೂ ಆಗಬೇಕಿರುವ ಬದಲಾವಣೆ ಬಗ್ಗೆ ಕುಟುಂಬಕ್ಕೆ ಮಾಹಿತಿ ಒದಗಿಸಲಾಗಿದೆ. ಈಗಾಗಲೇ ಹಲವು ಗ್ರಾಮದಲ್ಲಿ ಸರ್ವೇ ಮುಗಿದಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಶಾಸಕರ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಿದೆ.
ಎರಡು ದಿನದ ಶಿಬಿರದಲ್ಲಿ ಮಹತ್ವದ ಅಂಶಗಳನ್ನು ತಿಳಿದುಕೊಂಡಂತಾಗಿದೆ. ಮುಖ್ಯವಾಗಿ ಮಧ್ಯಮ ಕೈಗಾರಿಕೆಗಳಿಂದ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವುದು ಚರ್ಚೆಯಾಯಿತು. ಅಲ್ಲಿನ ಅಂಶಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಬಹುದು. ಈ ನಿಟ್ಟಿನಲ್ಲಿ ಈಗಾಗಲೇ ನಮ್ಮ ಕ್ಷೇತ್ರದಲ್ಲಿ ಮನೆ ಸರ್ವೇ ಮಾಡಿಸಲಾಗುತ್ತಿದೆ.ದರ್ಶನ್ ಪುಟ್ಟಣ್ಣಯ್ಯಮೇಲುಕೋಟೆ ಶಾಸಕ