

ಮಂಡ್ಯ: ನಗರದ ಹಳೇ ತಾಲೂಕು ಕಚೇರಿ ಕಟ್ಟಡದಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ನೂತನ ಕಚೇರಿಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮೇಲುಕೋಟೆ ಕ್ಷೇತ್ರದ ದುದ್ದ ಹೋಬಳಿ ಜನರ ಕುಂದು ಕೊರತೆ ತಿಳಿಸಲು ಪಾಂಡವಪುರಕ್ಕೆ ಬರಲು ಸಾಧ್ಯವಾಗುವುದಿಲ್ಲ. ದೂರ ಆಗಿರುವ ಕಾರಣ ಮಂಡ್ಯದಲ್ಲೇ ತಮ್ಮ ಕಚೇರಿಯನ್ನು ಸ್ಥಾಪಿಸಲಾಗಿದೆ. ವಾರಕ್ಕೆ ಒಂದು ದಿನ ಈ ಕಚೇರಿಯಲ್ಲಿ ನಾನು ಲಭ್ಯವಿದ್ದು, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಕೆಲಸ ಮಾಡುತ್ತೇನೆ. ದುದ್ದ ಹೋಬಳಿಯ ಜನರು ಸರ್ಕಾರದಿಂದ ಆಗಬಹುದಾದ ಕೆಲಸ ಕಾರ್ಯಗಳಿಗೆ ತಮ್ಮ ಕಚೇರಿಯಲ್ಲಿ ಭೇಟಿ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.
ಮಹಿಳೆಯರಿಂದ ಅಭಿನಂದನೆ: ಇದೇ ವೇಳೆ ಹೊಳಲು ಭಾಗದ ಮಹಿಳಾ ಮಂಡಳಿ ಸದಸ್ಯರು, ರೈತ ಮಹಿಳೆಯರು ಶಾಸಕ ದರ್ಶನ್ ಅವರಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು. ನಂತರ ಹೊಳಲು ಭಾಗದ ಸಾರ್ವಜನಿಕರು, ರೈತರು, ಅಂಗವಿಕಲರು ಸೇರಿದಂತೆ ಹಲವರ ಕುಂದು ಕೊರತೆಗಳನ್ನು ಆಲಿಸಿ ಸೂಕ್ತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು. ಕೆಲವು ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲೇ ವ್ಯವಹರಿಸಿ ಪರಿಹರಿಸುವುದಾಗಿ ಭರವಸೆ ನೀಡಿದರು.
ರೈತ ಮುಖಂಡರಾದ ಲತಾ ಶಂಕರ್, ನಿಂಗರಾಜಮ್ಮ, ಚೇತನ್, ಚಂದನ್ ಇತರರಿದ್ದರು.