

ಮಂಡ್ಯ: ಹಳ್ಳಗಳು, ಕೆರೆ ಕಟ್ಟೆಗಳನ್ನು ದಯವಿಟ್ಟು ಯಾರು ಒತ್ತುವರಿ ಮಾಡಿಕೊಳ್ಳಬೇಡಿ. ಈಗಾಗಲೇ ಒತ್ತುವರಿ ಮಾಡಿಕೊಂಡಿ ರುವವರು ಸ್ವತಃ ತೆರವುಗೊಳಿಸಿ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ ನೀಡಿದರು.
ಮಂಡ್ಯ ತಾಲೂಕಿನ ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಭರ್ತಿಯಾಗಿರುವ ದುದ್ದ ಕೆರೆಯಿಂದ 300 ರಿಂದ 400 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಬೆಳೆ ಬೆಳೆಯಲು ನೀರು ಸಿಗುತ್ತದೆ ಎಂದು ಹೇಳಿದರು.
ಹಗಲು ರಾತ್ರಿ ಎನ್ನದೆ ಇಂಜಿನಿಯರ್‌ಗಳ ಜತೆ ದುದ್ದ ಗ್ರಾಮಸ್ಥರು ಸೇರಿ ಕೆರೆ ತುಂಬಿಸಿದ್ದಾರೆ. ಈ ಭಾಗದಲ್ಲಿ ಇದೇ ರೀತಿ ಕೆರೆಗಳು ತುಂಬಿ ರೈತರಿಗೆ ಒಳ್ಳೆಯದಾಗಲಿ. ಎಲ್ಲರೂ ನೀರನ್ನು ಶೇಖರಣೆ ಮಾಡಿಕೊಳ್ಳುವ ಹಾಗೂ ಬಳಸಿಕೊಳ್ಳುವ ಬಗ್ಗೆ ಗಮನ ಹರಿಸಬೇಕು. ದುದ್ದ ಹೋಬಳಿಯಲ್ಲಿ 29 ಕೆರೆ ಇದ್ದು, ಇದರಲ್ಲಿ 19 ಕೆರೆಗಳು ಶೇ.100ರಷ್ಟು ತುಂಬಿದ್ದು, ಶೇ.50ರಷ್ಟು ಮೇಲ್ಪಟ್ಟು 6 ಕೆರೆ, ಶೇ.25ರಷ್ಟು ಮೂರು ಕೆರೆಗಳು ಭರ್ತಿ ಎಂದು ತಿಳಿಸಿದರು.
ಹೇಮಾವತಿ ಎಡದಂಡೆ ನಾಲಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಎಲ್.ಆನಂದ್ ಮಾತನಾಡಿ, ದೇವರ ಅನುಗ್ರಹದಿಂದ ಕೆರೆಗಳು ತುಂಬಿವೆ. ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿದೆ. ಇದರಿಂದ ರೈತರ ಮೊಗದಲ್ಲಿ ನಗುವಿದೆ. ಜನರು ಹಳ್ಳಗಳನ್ನು ಒತ್ತುವರಿ ಮಾಡಿಕೊಳ್ಳಬೇಡಿ. ಹಳ್ಳಗಳಿಗೆ ಕಟ್ಟೆ ಹಾಕಬೇಡಿ. ಇದರಿಂದ ಬೆಳೆ ನಷ್ಟವಾಗುತ್ತದೆ. ಕೆರೆಗಳನ್ನು ತುಂಬಿಸಲು ಗ್ರಾಮಸ್ಥರು ನಮಗೆ ಸಹಕರಿಸಿದ್ದಾರೆ ಎಂದು ಹೇಳಿದರು.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀನಾಥ್, ಸಹಾಯಕ ಇಂಜಿನಿಯರ್ ಪುನೀತ್, ಗ್ರಾಮದ ಮುಖಂಡರಾದ ಛೇರ್ಮನ್ ನರಸಿಂಹೇಗೌಡ, ಶ್ರೀನಿವಾಸಯ್ಯ, ಗೋಪಾಲ್, ನಾಗಶೆಟ್ಟಿ, ಪ್ರಶೀಲ್, ಸೋಮಶೇಖರ್ ಇತರರಿದ್ದರು.