

ಕೆ.ಆರ್.ನಗರ: ತಾಲೂಕಿನ ಚಂದಗಾಲು ಗ್ರಾಮದ ಮಹದೇವನಾಯಕ ಕುಟುಂಬಸ್ಥರ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕ ಡಿ.ರವಿಶಂಕರ್ ಕಿಡಿಕಾರಿದರು.
ಮೂರು ದಿನಗಳಿಂದ ನಿರಂತರವಾಗಿ ನೊಂದ ಕುಟುಂಬದವರ ಜತೆಯಲ್ಲಿದ್ದು ಅವರಿಗೆ ಸಾಂತ್ವನ ಹೇಳುತ್ತಿದ್ದೇನೆ. ಶವ ಸಂಸ್ಕಾರಕ್ಕೆ ಸಹಾಯ ಮಾಡುವ ಜತೆಗೆ ನೊಂದ ಕುಟುಂಬದವರ ಮುಂದಿನ ಭವಿಷ್ಯಕ್ಕಾಗಿ 2 ಲಕ್ಷ ರೂ.ಗಳನ್ನು ಈಗಾಗಲೇ ನೀಡಿದ್ದು ಅದನ್ನು ಮಕ್ಕಳಿಬ್ಬರ ಹೆಸರಲ್ಲಿ ಡಿಪಾಸಿಟ್ ಮಾಡಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣದಲ್ಲಿ ಪೊಲೀಸ್ ವೈಫಲ್ಯ ಕಂಡು ಬಂದಿದ್ದರಿಂದ ಮೇಲಧಿಕಾರಿಗಳೊಂದಿಗೆ ಮಾತನಾಡಿ ನಿರ್ಲಕ್ಷೃ ವಹಿಸಿದ ಪೊಲೀಸರನ್ನು ಈಗಾಗಲೇ ಅಮಾನತು ಮಾಡಿಸಲಾಗಿದೆ. ಮೃತರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ತಲಾ ನಾಲ್ಕು ಲಕ್ಷ ರೂ. ಚೆಕ್ಕನ್ನು ಶವ ಸಂಸ್ಕಾರಕ್ಕೆ ಮೊದಲೇ ನೀಡುವಂತೆ ಸೂಚಿಸಿ ಏರ್ಪಾಡು ಮಾಡಲಾಗಿತ್ತು. ಆದರೆ ಕುಟುಂಬಸ್ಥರು ಅಧಿಕಾರಿಗಳಿಂದ ಚೆಕ್ ಪಡೆಯಲು ನಿರಾಕರಿಸಿದರು ಎಂದರು.
ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿಲ್ಲ. ನಿಮ್ಮಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ. 20 ವರ್ಷಗಳಿಂದ ಜನರ ಮಧ್ಯೆ ಇದ್ದು ನಾನು ಎಲ್ಲವನ್ನೂ ಅರಿತಿದ್ದು, ನನ್ನ ಸೇವೆ ಪರಿಗಣಿಸಿ ಜನ ನನಗೆ ಅಧಿಕಾರ ನೀಡಿದ್ದಾರೆ. ಅದನ್ನು ನಾನು ಎಂದು ದುರುಪಯೋಗ ಮಾಡುವುದಿಲ್ಲ ಎಂದು ಸಾ.ರಾ.ಮಹೇಶ್‌ಗೆ ಟಾಂಗ್ ನೀಡಿದರು.
ನೀವು ಶಾಸಕರಾಗಿದ್ದ ಅವಧಿಯಲ್ಲಿ ಸಾಲಿಗ್ರಾಮದ ದಲಿತ ಕೇರಿಯಲ್ಲಿ ಕಲ್ಲು ತೂರಾಟ ನಡೆದಿತ್ತು. ಆದರೆ ಆ ಪ್ರಕರಣದಲ್ಲಿ ನೊಂದ ದಲಿತ ಕುಟುಂಬಗಳಿಗೆ ನೀವು ನ್ಯಾಯ ಕೊಡಿಸಲಿಲ್ಲ. ಸಿದ್ದಾಪುರ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ನಾಮಫಲಕ ಅಳವಡಿಸುವ ವಿಚಾರದಲ್ಲಿ ದಲಿತರ ಕೇರಿಗೆ ನುಗ್ಗಿ ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ನೀವೇ ರಕ್ಷಣೆ ಮಾಡಿದಿರಿ ಎಂದು ಆರೋಪಿಸಿದ ಅವರು, ಚಂದಗಾಲು ಪ್ರಕರಣದಲ್ಲಿ ತಪ್ಪು ಮಾಡಿರುವುದು ಸಾಬೀತಾದರೆ ರಾಜಕೀಯ ಅಂತ್ಯ ಮಾಡುತ್ತೇನೆ ಎಂದು ಸವಾಲು ಹಾಕಿದರು.
ನಾನು ಹೋರಾಟದಿಂದ ಬಂದವನು. ಜನರ ಸೇವೆಯೇ ಆದ್ಯ ಕರ್ತವ್ಯ. ನನಗೆ ಕ್ಷೇತ್ರದ ಅಭಿವೃದ್ಧಿ ಮಾಡುವುದು ಹೇಗೆ ಎಂದು ಗೊತ್ತು. ಇನ್ನು ಮುಂದಾದರೂ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಡಿ ಎಂದರು.
ಕಾಂಗ್ರೆಸ್ ಎಸ್‌ಟಿ ಘಟಕದ ರಾಜ್ಯ ಉಪಾಧ್ಯಕ್ಷ ಕಲ್ಲಹಳ್ಳಿ ಶ್ರೀನಿವಾಸ್, ಚಂದಗಾಲು ಮುಖಂಡ ಸತೀಶ್ ನಾಯಕ ಮಾತನಾಡಿದರು. ಎಸ್‌ಟಿ ಘಟಕದ ಕೆ.ಆರ್.ನಗರ ತಾಲೂಕು ಅಧ್ಯಕ್ಷ ಮಹದೇವನಾಯಕ, ಸಾಲಿಗ್ರಾಮ ಘಟಕದ ಅಧ್ಯಕ್ಷ ನರಸಿಂಹನಾಯಕ, ಜಿಲ್ಲಾ ಕಾಂಗ್ರೆಸ್ ಎಸ್‌ಟಿ ಯುವ ಘಟಕದ ಕಾರ್ಯದರ್ಶಿ ಮಹದೇವ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್, ಪುರಸಭಾ ಸದಸ್ಯರಾದ ಕೋಳಿಪ್ರಕಾಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.