

ಹೊನ್ನಾಳಿ: ಕೆಚ್ಚೆದೆಯ ವೀರ ವನಿತೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ ಅವರ ಸಾಧನೆ ಹಾಗೂ ಇತಿಹಾಸವನ್ನು ಯುವಪೀಳಿಗೆ ಅತ್ಯವಶ್ಯಕವಾಗಿ ತಿಳಿಯಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಯುವಕರಿಗೆ ಸಲಹೆ ನೀಡಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ ಹಾಗೂ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಅವರ 201ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.
ಚನ್ನಮ್ಮಳ ಆದರ್ಶ ಮಕ್ಕಳಿಗೆ ಪರಿಚಯಿಸಬೇಕು. ಅವರ ಹೋರಾಟ ಎಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಬೇಕು ಎಂದರು.
ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರಿಡಲು ಪುರಸಭೆಯ ಅನುಮತಿ ಬೇಕು. ಅವರು ಅನುಮತಿ ಪತ್ರ ನೀಡಿದರೆ ನಾನು ಸಾರಿಗೆ ಸಚಿವರ ಬಳಿ ರ್ಚಚಿಸಿ ನಂತರ ಸಕಾರಾತ್ಮಕ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ತುಂಗಭದ್ರಾ ಸೇತುವೆ ಬಳಿ ಇರುವ ರಾಣಿ ಚನ್ನಮ್ಮ ಉದ್ಯಾನವನಕ್ಕೆ ತಂತಿ ಬೇಲಿ ಹಾಕಿಸಿ, ಅಭಿವೃದ್ಧಿ ಪಡಿಸಲು ಪಂಚಮಸಾಲಿ ಸಮಾಜ ಸಹಕಾರ ನೀಡಬೇಕು. ಆದಷ್ಟು ಬೇಗ ತಂತಿ ಬೇಲಿ ಹಾಕುವ ಕಡೆ ಗಮನ ಹರಿಸೋಣ ಎಂದರು.
ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಚನ್ನಮ್ಮಳ ಜತೆಯಲ್ಲಿ ಅವಳ ಬಲಗೈ ಬಂಟನಾಗಿ ಸಂಗೊಳ್ಳಿ ರಾಯಣ್ಣ ಅವರ ಸೇವೆಯೂ ಅವಿಸ್ಮರಣೀಯವಾಗಿದೆ ಎಂದು ಹೇಳಿದರು.
ಪಂಚಮಸಾಲಿ ಸಮಾಜದ ಮುಖಂಡರಾದ ಪಟ್ಟಣಶೆಟ್ಟಿ ಪರಮೇಶ್, ಸಮಾಜದ ಯುವ ಘಟಕದ ಅಧ್ಯಕ್ಷ ಸಾಯಿ ಹಾಲೇಶ್, ತಹಸೀಲ್ದಾರ್ ರಾಜೇಶ್ಕುಮಾರ್ ಮಾತನಾಡಿದರು. ಹಿರೇಮಠದ ಬಸವರಾಜಪ್ಪ ಅವರು ರಾಣಿ ಚನ್ನಮ್ಮ ಅವರ ಬಗ್ಗೆ ಉಪನ್ಯಾಸ ನೀಡಿದರು.
ಪೇಟೆ ಮಲ್ಲೇಶ್, ಕುಂಕೋದ್ ಹಾಲೇಶ್, ಚಂದ್ರಶೇಖರ್ ಪಾಟೀಲ್, ಗಿರೀಶ್, ಗುಂಡ, ಬಸವರಾಜು, ವಿಜಯ ಪಟ್ಟಣಶೆಟ್ಟಿ, ಗಂಗಾಧರ್, ಕವಿತಾ ಚನ್ನೇಶ್, ಶಶಿ ದಿವಾಕರ್, ಸಣ್ಣಕ್ಕಿ ಬಸವನಗೌಡ, ಎಚ್.ಎ. ಉಮಾಪತಿ, ಆರ್. ನಾಗಪ್ಪ ಇತರರು ಇದ್ದರು.