

ನ್ಯಾಮತಿ: ಹೊನ್ನಾಳಿ ತಾಲೂಕಿನ ಕುಳಗಟ್ಟೆ, ಹನುಮಸಾಗರ ಹಾಗೂ ಹೊಸಕಟ್ಟೆ ಇನಾಂ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಜಿಲ್ಲಾಧಿಕಾರಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲೂಕಿನ ಸೂರಗೊಂಡನಕೊಪ್ಪದ ಹೊರವಲಯದಲ್ಲಿರುವ ಭಾಯಗಢನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ತಾಲೂಕಿನ ಕಡೆ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೊನ್ನಾಳಿ ತಾಲೂಕಿನ ಕುಳಗಟ್ಟೆ, ಹನುಮಸಾಗರ ಹಾಗೂ ಹೊಸಕಟ್ಟೆ ಇನಾಂ ಗ್ರಾಮಗಳಲ್ಲಿ ಸಾಕಷ್ಟು ಜಮೀನು ಇದ್ದರೂ ಗ್ರಾಮಸ್ಥರ ಹೆಸರಿಗೆ ಖಾತೆಗಳಾಗಿಲ್ಲ. ನೀವು ಸಹ ಅಧಿಕಾರಿಗಳ ಮಟ್ಟದಲ್ಲಿ ರ್ಚಚಿಸಿ ಕಂದಾಯ ಗ್ರಾಮಕ್ಕೆ ವ್ಯವಸ್ಥೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಅವಳಿ ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಬೇಕಾಗಿದ್ದು, ಇದಕ್ಕೆ ಅಧಿಕಾರಿಗಳು ದಿಟ್ಟ ತೀರ್ವನಗಳನ್ನು ತೆಗೆದುಕೊಳ್ಳಬೇಕಾಗಿದೆ. ಕೆಲವು ಕಾನೂನಾತ್ಮಕವಾಗಿ ಬಗೆಹರಿದರೂ, ಇನ್ನು ಕೆಲವು ಸಮಸ್ಯೆಗಳನ್ನು ಮಾನವೀಯತೆ ನೆಲೆಗಟ್ಟಿನಲ್ಲಿ ಬಗೆಹರಿಸಬೇಕಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿ, ಕಂದಾಯ ಸಚಿವ ಕೃಷ್ಣಬೈರೇಗೌಡ ಆದೇಶದಂತೆ ನಾವು ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತಿದ್ದೇವೆ. ಸಚಿವರ ಸೂಚನೆಯಂತೆ ಸಾಕಷ್ಟು ಮಾರ್ಪಾಡುಗಳನ್ನು ಸಹ ಮಾಡುತ್ತಿದ್ದೇವೆ. ಶೀಘ್ರವೇ ರೈತರ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ. ಅವಳಿ ತಾಲೂಕಿನಲ್ಲಿ ಮೂರು ಲಕ್ಷ ಜನರು, 62 ಅಧಿಕಾರಿಗಳು ಇದ್ದಾರೆ. 5 ಸಾವಿರಕ್ಕೆ ಒಬ್ಬ ಅಧಿಕಾರಿ ಸೇವೆ ಸಲ್ಲಿಸುತ್ತಿದ್ದಾರೆ. ಇ-ಖಾತೆಗೆ ರೈತರು ಅರ್ಜಿ ಸಲ್ಲಿಸಲೇಬೇಕು ಎಂದೆನಿಲ್ಲ. ನಾವೇ ಅವರ ದಾಖಲಾತಿಗಳನ್ನು ಸಂಗ್ರಹಿಸಿ ಇ-ಸ್ವತ್ತು ಮಾಡಿಕೊಡಬೇಕು. ಪಿಡಿಒಗಳು ಇದನ್ನು ಗಮನಿಸಬೇಕು ಎಂದರು.
ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಅವಳಿ ತಾಲೂಕಿನಲ್ಲಿ ಇ-ಸ್ವತ್ತು ಶೇ.35 ರಷ್ಟು ಮಾಡಿಕೊಟ್ಟಿದ್ದೇವೆ. ಇನ್ನೂ ಮಾಡಿಕೊಡುತ್ತಿದ್ದೇವೆ. ಪಿಡಿಒಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದರು.
ನ್ಯಾಮತಿ ತಹಸೀಲ್ದಾರ್ ಕವಿರಾಜ್, ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜಗೌಡ, ಇಒ ಗಳಾದ ರಾಘವೇಂದ್ರ, ಪ್ರಕಾಶ್, ಗ್ರೇಡ್-2 ತಹಸೀಲ್ದಾರ್ ಗೋವಿಂದಪ್ಪ, ಅಧಿಕಾರಿಗಳಾದ ಸೋಮ್ಲನಾಯ್್ಕ ಡಾ. ಗಿರೀಶ್, ತುಂಗಾ ಮೇಲ್ದಂಡೆ, ಎಇಇ ಮಂಜುನಾಥ್, ಬೆಸ್ಕಾಂ ಎಇಇಗಳಾದ ಜಯಪ್ಪ, ಶ್ರೀನಿವಾಸ್ ಬಿ.ಕೆ ಸೇರಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಸಿಬ್ಬಂದಿ ಕೊರತೆ: ಸರ್ವೆ ಮಾಡಲು ಸಿಬ್ಬಂದಿ ಕೊರತೆ ಇದೆ ಎಂದು ಹೊನ್ನಾಳಿ ಹಾಗೂ ನ್ಯಾಮತಿ ತಹಸೀಲ್ದಾರ್ರು ತಿಳಿಸಿದಾಗ ದಾವಣಗೆರೆಯ ದೂಡಾ ಹಾಗೂ ಮಹಾನಗರ ಪಾಲಿಕೆಯ ಸರ್ವೆ ಅಧಿಕಾರಿಗಳನ್ನು 15 ದಿನಗಳ ಮಟ್ಟಿಗೆ 2 ತಾಲೂಕುಗಳಿಗೂ ನಿಯೋಜನೆ ಮಾಡುತ್ತೇವೆ. ಅಷ್ಟರಲ್ಲಿ ಸರ್ವೆ ಕಾರ್ಯ ಸಂಪೂರ್ಣ ಮುಗಿಯಬೇಕು ಎಂದು ತಹಸೀಲ್ದಾರ್ಗಳಿಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚಿಸಿದರು.