

ನ್ಯಾಮತಿ: ಜೆಜೆಎಂ ಜನರ ಆರೋಗ್ಯ, ಸಮಯವನ್ನು ಉಳಿಸುವ ಉತ್ತಮ ಯೋಜನೆಯಾಗಿದ್ದು, ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲೂಕಿನ ಚಟ್ನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಪಂ, ತಾಪಂ, ಮತ್ತು ಗ್ರಾಪಂ ಸಹಯೋಗದಲ್ಲಿ ಸುಸ್ಥಿರ ಕುಡಿಯುವ ನೀರಿನ ಯೋಜನೆಯಡಿ ಚಟ್ನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಜೆಜೆಎಂ 24*7 ನೀರು ಸರಬರಾಜು ಘೊಷಣಾ ಅನುಷ್ಠಾನ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಜಲಜೀವನ್ ಮಿಷನ್ ಯೋಜನೆ ಮಹತ್ವವನ್ನು ಅರಿತು ಜನರು ಅಳವಡಿಕೆಗೆ ಮುಂದಾದರೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ ಅವರು, ತಾಲೂಕಿನ ಎಲ್ಲ ಕೆರೆಗಳನ್ನು ನೀರು ತುಂಬಿಸುವ ಯೋಜನೆಗೆ ಕ್ರಮ ಜರುಗಿಸಲಾಗಿದೆ ಎಂದರು.
ಜಿಪಂ ಸಿಇಒ ಗಿಟ್ಟೆ ಮಾಧವ ವಿಠ್ಠಲರಾವ್ ಮಾತನಾಡಿ, ರಾಜ್ಯದಲ್ಲಿ 36 ಗ್ರಾಮಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ನಿರಂತರ ನೀರು ಸರಬರಾಜು ಮಾಡಲು ಮುಂದಾಗಿದ್ದು, ಜಿಲ್ಲೆಯಲ್ಲೇ 17 ಗ್ರಾಮಗಳು ಈ ಯೋಜನೆಗೆ ಆಯ್ಕೆಮಾಡಲಾಗಿದೆ. ಮುಂದಿನ ಆಗಸ್ಟ್ 15ರೊಳಗೆ ಜಿಲ್ಲೆಯಲ್ಲಿ 100 ಗ್ರಾಮಗಳಲ್ಲಿ 24*7 ಜೆಜೆಎಂ ಅಳವಡಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ನರೇಗಾ ಸೇರಿ ಗ್ರಾಮದ ಯಾವುದೇ ಸಮಸ್ಯೆಗಳಿದ್ದರೂ ನನಗೆ ನೇರವಾಗಿ ಕರೆ ಮಾಡಿ ತಿಳಿಸಿದರೆ ಪರಿಹಾರ ಮಾಡಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.
ತಾಪಂ ಇಒ ಎಚ್.ವಿ. ರಾಘವೇಂದ್ರ ಮಾತನಾಡಿ, ನಿರಂತರವಾಗಿ ನೀರು ಕೊಡುವುದರಿಂದ ಜನರಿಗೆ ನೀರು ಶೇಖರಣೆ ಮಾಡುವುದು ತಪ್ಪುತ್ತದೆ, ಕೂಲಿ ಕಾರ್ವಿುಕರು ನೀರಿಗಾಗಿ ಕಾಯದೇ ಕೆಲಸಗಳಿಗೆ ಹೋಗಬಹುದಾಗಿದೆ. ಜತೆಗೆ ಶುದ್ಧ ಕುಡಿಯುವ ನೀರಿನ ಲಭ್ಯತೆಯಿಂದ ಜನರ ಆರೋಗ್ಯ ಸುಧಾರಣೆಯಾಗುತ್ತದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸೋಮ್ಲಾನಾಯ್್ಕ ಮಾತನಾಡಿ, ಹೊನ್ನಾಳಿ ತಾಲೂಕಿನ ಹನಗವಾಡಿ ಗ್ರಾಮದ 565 ಮನೆಗಳಿಗೆ 24*7 ನೀರು ಒಗದಿಸಿದ್ದು, ಇದನ್ನು ವೀಕ್ಷಿಸಲು ವಿಶ್ವ ಬ್ಯಾಂಕ್ನವರು ಸ್ಥಳಕ್ಕೆ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನವೀನ್, ಮಾಜಿ ಗ್ರಾಪಂ ಅಧ್ಯಕ್ಷ ಮಲ್ಲೇಶಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಜಿಲ್ಲಾ ಎಇಇ ಷಣ್ಮುಖಪ್ಪ, ನರೇಗಾ ಎಡಿಎ ಸಂಗಮೇಶ್, ಪಿಡಿಒಗಳಾದ ವಿಜಯ್ಕುಮಾರ್, ಅರುಣ್, ಜಯಪ್ಪ, ವಿಶ್ವಬ್ಯಾಂಕ್ನ ನಂದನ್ಕುಮಾರ್, ಜಿಲ್ಲಾ ಯೋಜನಾ ವ್ಯವಸ್ಥಾಪಕ ಜಗದೀಶ್, ಅರಕೆರೆ ಮಧುಗೌಡ ಇತರರು ಇದ್ದರು.