ಸಾಹಿತ್ಯ ಕ್ಷೇತ್ರಕ್ಕೆ ಹೊನ್ನಾಳಿಯ ಅನುಪಮ ಕೊಡುಗೆ

hnl hatturu1 may 25
Published on

ಹೊನ್ನಾಳಿ: ಶಿವಮೊಗ್ಗ ಜಿಲ್ಲೆಯು ಸಾಹಿತ್ಯ, ರಾಜಕೀಯ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆಯನ್ನು ನೀಡಿದೆ. ಅದೇ ಸೊಗಡು ನಮ್ಮ ತಾಲೂಕಿಗೆ ಬಂದಿದ್ದು ಸಹಜವಾಗಿ ಸಾಹಿತ್ಯ- ಸಂಸ್ಕೃತಿ, ರಾಜಕೀಯ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ತಾಲೂಕಿನ ಹತ್ತೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರೊ. ಚನ್ನೇಶ್ ಹೊನ್ನಾಳಿ ಅವರು ಸಂಗ್ರಹಿಸಿ, ಸಂಪಾದಿಸಿರುವ ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಗಾಂಧಿ ಚರಿತ ಮತ್ತು ಸ್ವಾಗತಗೀತ, ಸಮಗ್ರ ಕಾವ್ಯ ಕೃತಿ ಬಿಡುಗಡೆ ಹಾಗೂ ಪಂಡಿತ್ ಬಿ.ಎಸ್. ಭಮೇಗೌಡರ 130ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಎಲ್ಲ ಕಡೆಯಿಂದ ನಿರ್ಲಕ್ಷ್ಯೊಳಕ್ಕಾಗಿದ್ದ ಭಮೇಗೌಡರ ಅನುಪಮ ಸಾಹಿತ್ಯ ಸೇವೆ ತಡವಾಗಿಯಾದರೂ ತಾಲೂಕಿನವರಾದ ಪ್ರೊ. ಚನ್ನೇಶ್ ಅವರ ಶ್ರಮದ ಕಾರಣ ಬೆಳಕಿಗೆ ಬರುತ್ತಿರುವುದು ಹೆಮ್ಮೆಪಡುವ ವಿಚಾರ ಎಂದರು.

ಕೃತಿಯನ್ನು ಲೋಕಾರ್ಪಣೆಗೊಳಿಸಿದ ಕುವೆಂಪು ವಿ.ವಿ. ಕನ್ನಡ ಭಾರತಿವಿಭಾಗ, ಶಂಕರಘಟ್ಟದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಕುಮಾರ ಚಲ್ಯ ಮಾತನಾಡಿ, ಬಳೂರು ಮನೆತನದ ಹತ್ತೂರು ಗ್ರಾಮದ ಭಮೇಗೌಡ ಅವರು ಇಡೀ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದರೂ ಅವರಿಗೆ ಸಿಗಬೇಕಾದ ಮನ್ನಣೆ, ಗೌರವ ಸಿಗದೇ ಇರುವುದು ವಿಷಾದನೀಯ ಎಂದು ತಿಳಿಸಿದರು.

ಸಾಗರದ ಶ್ರೀಮತಿ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಸಿ. ಕುನಗೋಡು ಮಾತನಾಡಿ, ಮೊಟ್ಟಮೊದಲ ಬಾರಿಗೆ 400 ಪುಟಗಳುಳ್ಳ ಭಾಮಿನಿ ಷಟ್ಪದಿಯನ್ನು ಭಮೇಗೌಡರು ರಚಿಸಿದ್ದು, ಈ ಕೃತಿ ಸಾಹಿತ್ಯ ಕ್ಷೇತ್ರದಲ್ಲಿಯೇ ವಿಶೇಷವಾಗಿದೆ. ಗಾಂಧಿ ಬಗ್ಗೆ ಸುಮಾರು 350 ಪದ್ಯಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಕೃತಿ ಸಂಗ್ರಾಹಕ ಪ್ರೊ. ಚನ್ನೇಶ್ ಮಾತನಾಡಿ, ನ್ಯಾಮತಿ ಮತ್ತು ಹೊನ್ನಾಳಿ ತಾಲೂಕಿನ ಇತಿಹಾಸದಲ್ಲಿ ಕಂಬಾರ ಪರ್ವತ ಮಲ್ಲಪ್ಪ , ಭಮೇಗೌಡ ಹಾಗೂ ಧನುಜಾ ನಾಯ್ಕ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅರ್ನ್ಯಘ ರತ್ನಗಳಿದ್ದಂತೆ. ಭಮೇಗೌಡರು ಭಾಮಿನಿ ಷಟ್ಪದಿಯಲ್ಲಿ ರಚಿಸಿರುವ ಸುಮಾರು 80 ಪದ್ಯಗಳು, 57 ಸ್ವಾಗತ ಗೀತೆಗಳು, 1081 ವಿವಿಧ ರೀತಿಯ ಪದ್ಯಗಳು ಲಭ್ಯವಾಗಿವೆ ಎಂದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಭಮೇಗೌಡರ ಕುಟುಂಬದವರಿಗೆ, ಸಾಹಿತಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಾನ್ನಿಧ್ಯವನ್ನು ನಂದಿಗುಡಿ ಬೃಹನ್ಮಠದ ಗುರುಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.

ಶಿವಮೊಗ್ಗದ ವಾಣಿ ಭಾರದ್ವಾಜ್ ಅವರು ಭಮೇಗೌಡರ ಕೆಲವು ಪದ್ಯಗಳ ವಾಚನ ಮಾಡಿದರು. ಶಾಸಕ ಡಾ.ಡಿ.ಬಿ. ಗಂಗಪ್ಪ, ಉದ್ಯಮಿ ಪರಮೇಶ್ವರಪ್ಪ ಹೈದ್ರಾಬಾದ್​ನ ಉದ್ಯಮಿ ಪರಮೇಶ್ವರಪ್ಪ ಬಿ. ಕಾಗಿನೆಲ್ಲಿ, ಮುಖಂಡರಾದ ಶಾಂತರಾಜ್ ಪಾಟೀಲ್ ಬಲಮುರಿ, ಎಚ್. ಕಡದಕಟ್ಟೆ ಎಂ.ಬಿ. ತಿಮ್ಮನಗೌಡ ಮಾತನಾಡಿದರು.

ಸಾಹಿತಿ ಭಮೇಗೌಡರ ಮಗ ಹಾಗೂ ಜಿಪಂ ಮಾಜಿ ಸದಸ್ಯ ಎ.ಬಿ. ನೇಮಿಚಂದ್ರ ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಮುಖಂಡರಾದ ಬಿ. ಸಿದ್ದಪ್ಪ, ಎಚ್.ಎ. ಉಮಾಪತಿ, ಡಾ. ರಾಜಕುಮಾರ್, ಹತ್ತೂರು ಜಯಪ್ಪ, ಶೇಖರಪ್ಪ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net