ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಒತ್ತು: ಕಾರ್ಯಕರ್ತರ ಸಭೆಯಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಹೇಳಿಕೆ

08M.D.R.3
Published on

ಮದ್ದೂರು: ಮದ್ದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆರೋಗ್ಯ, ಸಾಮಾಜಿಕ, ನೀರಾವರಿ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕೆಸ್ತೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿ, ನನ್ನ ಅಧಿಕಾರಾವಧಿಯಲ್ಲಿ ಎಲ್ಲ ವರ್ಗದವರಿಗೂ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲಮಂತ್ರವಾಗಿದೆ ಎಂದರು.ಸ
ಕೆಸ್ತೂರು ಗ್ರಾಮದಲ್ಲಿ ಪದವಿ ಕಾಲೇಜು ಆರಂಭಿಸಲು 10 ಎಕರೆ ಪ್ರದೇಶವನ್ನು ಮೀಸಲಿರಿಸಲಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಪದವಿ ಕಾಲೇಜು ಆರಂಭಿಸಲು ಅನುಮತಿ ನೀಡಿದ್ದರು. ಆದರೆ ಈಗಿನ ಸರ್ಕಾರ ಅದನ್ನು ರದ್ದುಗೊಳಿಸಿ ಬೇರೆ ಜಿಲ್ಲೆಗೆ ನೀಡಿದೆ. ನಾನು ಸರ್ಕಾರದ ಅನುದಾನ ಕಾಯದೆ ಖಾಸಗಿ ಕಂಪನಿಗಳ ಸಹಕಾರದಿಂದ ತಾಲೂಕಿನಲ್ಲಿ ವಿವಿಧ ಶಾಲೆಗಳ ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದೇನೆ ಎಂದರು.
ಮದ್ದೂರು ಕ್ಷೇತ್ರದಲ್ಲಿ ಶಾಶ್ವತ ಕಾಮಗಾರಿಗಳಿಗೆ ಒತ್ತು ನೀಡಿದ್ದೇನೆ. ಏತನೀರಾವರಿ ಯೋಜನೆ ಅನುಷ್ಠಾನ, ಕೆರೆಗಳನ್ನು ತುಂಬಿಸುವ ಕಾರ್ಯ, ವಸತಿ ಶಾಲೆಗಳು ಹಾಗೂ ಸಮುದಾಯ ಭವನಗಳ ನಿರ್ಮಾಣ, ಹೊಲಗದ್ದೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಗ್ರಾಮೀಣ ಭಾಗದ ರಸ್ತೆಗಳು, ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದರು.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಬಿಳಿಗೌಡ, ಹೂತಕೆರೆ ಗ್ರಾಪಂ ಅಧ್ಯಕ್ಷ ರವಿಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಕೂಳಗೆರೆ ಶೇಖರ್, ಜಿಪಂ ಮಾಜಿ ಸದಸ್ಯ ರವಿ, ಮುಖಂಡರಾದ ಎ.ಎಸ್.ಶಂಕರ್, ದೇವರಹಳ್ಳಿ ವೆಂಕಟೇಶ್, ಪ್ರಸಾದ್, ಶ್ರೀಧರ್, ಬೆಟ್ಟಸ್ವಾಮಿ, ಹರಕನಹಳ್ಳಿ ಗಂಗರಾಜು, ವಳಗೆರೆದೊಡ್ಡಿ ನಾಗೇಶ್, ಜಗದೀಶ್, ಮಣಿಕಂಠ, ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net