

ಮಂಡ್ಯ: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ವಕ್ಫ್‌ಬೋರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ರೈತರ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ವಕ್ಫ್‌ಬೋರ್ಡ್ ಅಧಿಕಾರಿಗಳಿಗೆ ಶಾಸಕ ರವಿಕುಮಾರ್ ಗಣಿಗ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಮುತ್ತೇಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಒಂದಿಂಚೂ ಜಾಗವನ್ನು ವಕ್ಫ್‌ಬೋರ್ಡ್‌ನವರು ಕಬಳಿಕೆ ಮಾಡಲು ಬಿಡುವುದಿಲ್ಲ. ಮೊದಲು ಬೆಂಗಳೂರಿನ ಐಷರಾಮಿ ಹೊಟೇಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಿ. ಅದು ಬಿಟ್ಟು ರೈತರ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ. ಕಳೆದ ಸರ್ಕಾರ ಕುತಂತ್ರ ಮಾಡಿ ಕಾಂಗ್ರೆಸ್ ಸರ್ಕಾರದ ಮೇಲೆ ಹಾಕುವ ಕೆಲಸ ಮಾಡಿದೆ. ಈ ಪ್ರಕರಣದಲ್ಲಿ ಮೊದಲು ಯಾವ ಅಧಿಕಾರಿಗಳು ಇಂತಹ ಕೆಲಸ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಿ ಅಂತಹವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ವಕ್ಫ್ ಬೋರ್ಡ್‌ನವರು ಮೊದಲು ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಹೊಟೇಲ್‌ಗಳನ್ನು ವಶಕ್ಕೆ ಪಡೆದು ವಕ್ಫ್ ಆಸ್ತಿ ಎಂದು ಫಲಕ ಹಾಕಲಿ. ಅದೇ ಸಾವಿರಾರು ಕೋಟಿ ರೂ ಮೌಲ್ಯದ್ದಾಗಿದೆ. ಅದನ್ನು ಬಿಟ್ಟು ರೈತರಿಗೆ ಸೇರಿದ ಮೂರ‌್ನಾಲ್ಕು ಗುಂಟೆ ಜಮೀನು ತಮ್ಮದು ಎಂದು ನೋಟೀಸ್ ಕೊಡುವುದು ಸರಿಯಲ್ಲ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದು, ವಕ್ಫ್ ನೀಡಿರುವ ನೋಟೀಸ್ ವಾಪಸ್ ಪಡೆಯುವಂತೆ ತಿಳಿಸಿದ್ದಾರೆ. ರಾಜ್ಯದಲ್ಲಿ ನಮ್ಮ ಸರ್ಕಾರವೇ ಇರಲಿ, ಬೇರೆ ಸರ್ಕಾರವೇ ಇರಲಿ, ರೈತರ ಒಂದಿಂಚೂ ಜಾಗವನ್ನು ವಶಕ್ಕೆ ಪಡೆಯಲು ಬಿಡುವುದಿಲ್ಲ. ನಾವು ನಮ್ಮ ರೈತರ ಪರ ಇದ್ದೇವೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಅಧಿಕಾರಾವಧಿಯಲ್ಲಿ ವಕ್ಫ್ ಆಸ್ತಿಗಳನ್ನು ಗುರುತಿಸಿ ನೋಟೀಸ್ ನೀಡಲಾಗಿತ್ತು. ಮೊಳಕೆ ಹಾಕಿದ್ದೂ ಅವರೇ, ಅದಕ್ಕೆ ನೀರು, ಗೊಬ್ಬರ ಹಾಕಿ ಪೋಷಿಸಿ ಈಗ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸಲು ಕುತಂತ್ರ ನಡೆಸುತ್ತಿದ್ದಾರೆ. ಯಾವ ಕುತಂತ್ರವೂ ನಡೆಯುವುದಿಲ್ಲ. ಇದೊಂದು ರೀತಿಯಲ್ಲಿ ರಾಜಕಾರಣದ ಭಯೋತ್ಪಾದನೆಯಾಗಿದೆ ಎಂದು ಟೀಕಿಸಿದ ಶಾಸಕ, ಎಲ್ಲವನ್ನೂ ಮಾಡಿರುವ ಬಿಜೆಪಿಯವರು ಚುನಾವಣೆಯಲ್ಲಿ ಇದನ್ನು ಆಚೆ ತಂದು ಹಿಂದುಗಳ ಜಮೀನು, ದೇವಸ್ಥಾನ ಕಿತ್ತುಕೊಳ್ಳುತ್ತಿದ್ದಾರೆ ಎಂದು ನಾಟಕವಾಡುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ರೈತರ ಜಮೀನು ಕೊಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಶಾಲಿನಿ ರಜನೀಶ್ ಅವರು ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ವೇಳೆ 26 ಸಾವಿರ ಎಕರೆ ಪ್ರದೇಶವನ್ನು ವಕ್ಫ್ ಆಸ್ತಿಯನ್ನಾಗಿ ಘೋಷಿಸಿದ್ದರೆ, ಅವರ ವಿರುದ್ಧವೂ ತನಿಖೆಯಾಗಲಿ. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಮಾಡಿರುವ ಅಧಿಸೂಚನೆಯನ್ನೇ ವಾಪಸ್ ಪಡೆಯಬೇಕು. ನಮ್ಮ ರೈತರ ಜಮೀನನ್ನು ಬಿಡಿಸಿಕೊಳ್ಳಲು ಸಾಧ್ಯವಿಲ್ಲ. ದೊಡ್ಡ ದೊಡ್ಡ ಆಸ್ತಿಗಳನ್ನು ಅವರು ವಾಪಸ್ ಪಡೆಯಲಿ, ನಂತರ ನೋಡೋಣ ಎಂದು ಸವಾಲು ಹಾಕಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು: ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಎರಡು ನಾಲಗೆ. ಮಗುವನ್ನೂ ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸವನ್ನು ಬಿಜೆಪಿ ಮತ್ತು ಬೊಮ್ಮಾಯಿ ಮಾಡುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 10 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಕಳೆದ ಬಾರಿ ಪಠಾಣ್‌ಗೆ ಸೋಲುಂಟಾಗಿತ್ತು. ಈ ಬಾರಿ ಅವರಿಗೆ ಚೆನ್ನಾಗಿದ್ದು, ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ಅವರು 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಕಳೆದ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಗೆದ್ದಿದ್ದರು. ಆದರೆ ಆ ಕ್ಷೇತ್ರದಲ್ಲಿ ಒಂದೇ ಒಂದು ರಸ್ತೆಯೂ ಸರಿಯಾಗಿಲ್ಲ. ನಿಖಿಲ್ ಬಿದ್ದು ಹೋಗುತ್ತಾರೆ. ನಾನು ಕ್ಷೇತ್ರದಾದ್ಯಂತ ಓಡಿದ್ದೇನೆ. ಅವರಿಗೆ ಗೆಲುವು ಸಾಧ್ಯವಿಲ್ಲ ಎಂದು ಹೇಳಿದರು.
ನಾವೇ ನಿಜವಾದ ಒಕ್ಕಲಿಗರು. ರೆಬಲ್ ಒಕ್ಕಲಿಗರಲ್ಲ. ಆದರೆ ಜನ ನಮ್ಮನ್ನು ಏಕೆ ಬೆಂಬಲಿಸುವುದಿಲ್ಲ ಎಂಬುದು ಅರ್ಥವಾಗದ ಪ್ರಶ್ನೆ. ನನ್ನ ಅಧಿಕಾರಾವಧಿಯಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ. ಆದರೆ ಜನ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಿಲ್ಲ. ಕುಮಾರಸ್ವಾಮಿ ನಿಜವಾದ ಒಕ್ಕಲಿಗರಲ್ಲ ಎಂದು ಹೇಳಲಿಲ್ಲ. ಆದರೆ ನಾವೂ ನಿಜವಾದ ಒಕ್ಕಲಿಗರೇ, ಏಕೆ ಜನ ನಮ್ಮನ್ನು ಬೆಂಬಲಿಸುವುದಿಲ್ಲ ಎಂಬ ಭಾವನೆ ಮೂಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೊಡ್ಡವರು. ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಜಯೇಂದ್ರ ಹಗಲುಗನಸು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಗಲುಗನಸು ಕಾಣುತ್ತಿದ್ದಾರೆ. ಬೆಳಗ್ಗೆ ಬೇರೆ ಹೇಳುತ್ತಾರೆ. ರಾತ್ರಿ ಮತ್ತೊಂದು ಹೇಳುತ್ತಾರೆ. ಮೊದಲು ಅವರ ಪಕ್ಷದ ಬಸವರಾಜ್ ಯತ್ನಾಳ್, ರಮೇಶ್ ಜಾರಕಿಹೊಳಿ ಅವರ ಬಾಯಿ ಮುಚ್ಚಿಸಿ, ನಂತರ ನಮ್ಮ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.