ತೆಂಗು ಬೆಳೆಗಾರರ ಹಿತ ಕಾಯಲು ಬದ್ಧ

dj hsd prathiba
Published on

ಹೊಸದುರ್ಗ: ತೆಂಗು ಬೆಳೆಗಾರರ ಹಿತ ಕಾಯುವ ಉದ್ದೇಶದಿಂದ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಮನವಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ತಾಲೂಕಿನ ರೈತರ ನಿಯೋಗ ಕರೆದುಕೊಂಡು ಹೋಗುವುದಾಗಿ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಪಟ್ಟಣದ ಸಿದ್ದರಾಮೇಶ್ವರ ಸಭಾಂಗಣದಲ್ಲಿ ಶನಿವಾರ ನೊಳಂಬ ಲಿಂಗಾಯಿತ ಸಮಾಜ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ತೆಂಗು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಂಭೀರ ಚಿಂತನೆಗಳು ನಡೆದಿವೆ ಎಂದರು.

ನೊಳಂಬ ಲಿಂಗಾಯಿತ ಸಮಾಜ ತಾಲೂಕಿನಲ್ಲಿ ಹಿರಿಯತನ ಹೊಂದಿದೆ. ಈ ಸಮುದಾಯದ ಗಾಂಧಿವಾದಿ ಜಿ.ಬಸಪ್ಪ ಮೊದಲ ವಿಧಾನಸಭೆಯ ಶಾಸಕರಾಗಿ ಕಾರ್ಯನಿರ್ವಹಿಸುವ ಮೂಲಕ ತಾಲೂಕಿನ ರಾಜಕೀಯಕ್ಕೆ ಗೌರವ ತಂದಿದ್ದಾರೆ.

ಅವರ ಆದರ್ಶಗಳ ಹಾದಿಯಲ್ಲಿ ನಾನು ನಡೆಯುತ್ತಿದ್ದೇನೆ ಎಂದರು.

ಕುವೆಂಪು ವಿಶ್ವ ವಿದ್ಯಾಲಯದ ಉಪ ಕುಲಸಚಿವ ಗೋಪಿನಾಥ ಮಾತನಾಡಿ, ಮಕ್ಕಳು ಧನಾತ್ಮಕ ಚಿಂತನೆಗಳೊಂದಿಗೆ ಪ್ರಯತ್ನಿಸಿದರೆ ಯಶಸ್ಸು ಸಾಧ್ಯವಾಗಲಿದೆ.

ಸೋಲಿಗೆ ಚಿಂತಿಸದೆ ಗುರಿಯನ್ನು ತಲುಪಲು ಶ್ರಮಿಸಬೇಕಿದೆ. ಸಾಧಕರು ಸಾಮಾಜಿಕ ಕಾಳಜಿ, ಸತ್ಕಾರ್ಯ ಮಾಡುವ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನೊಳಂಬ ಲಿಂಗಾಯಿತ ಸಮಾಜದ ಅಧ್ಯಕ್ಷ ಚಂದ್ರಶೇಖರ್, ವಕೀಲರ ಸಂಘದ ಅಧ್ಯಕ್ಷ ಎಚ್.ಬಿ.ರವಿಕುಮಾರ್, ಜಿಪಂ ಸದಸ್ಯ ಆರ್. ಹನುಮಂತಪ್ಪ, ಎನ್.ಸಿ.ಚಂದ್ರಶೇಖರ್, ಷಡಕ್ಷರಪ್ಪ, ಬೊಮ್ಮಣ್ಣ, ರಂಗೇಶ್, ವೀರೇಂದ್ರ ಪಾಟೀಲ್ ಇತರರಿದ್ದರು.

ಹೊಸದುರ್ಗ ಪಟ್ಟಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯದೆ ರಚನೆಯಾಗಿರುವ ವಸತಿ ಬಡಾವಣೆಯಲ್ಲಿರುವ ನಿವೇಶನಗಳಿಗೆ ಈ ಸ್ವತ್ತು ದೊರೆಯದೆ ಇರುವುದು ಸಾರ್ವಜನಿಕರಿಗೆ ತೊಂದರೆಯಾಗಿದೆ. ಪೌರಾಡಳಿತ ಸಚಿವರೊಂದಿಗೆ ಚರ್ಚಿಸಿ ಶೀಘ್ರ ಸಮಸ್ಯೆ ಪರಿಹರಿಸಲಾಗುವುದು.ಬಿ.ಜಿ.ಗೋವಿಂದಪ್ಪ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net