

ಮಂಡ್ಯ: ತಾಲೂಕಿನ ಬಿಳಗುಲಿ ಗ್ರಾಮದಲ್ಲಿ ಆಶ್ರಯ ನಿವೇಶನಕ್ಕೆಂದು ಮೀಸಲಿಟ್ಟಿದ್ದ ಜಾಗವನ್ನು ಬೆಂಗಳೂರು ಮೂಲದ ವ್ಯಕ್ತಿಗಳ ಕಬಳಿಕೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಖುದ್ದು ಒತ್ತುವರಿ ತೆರವು ಮಾಡಿಸಿ ಗ್ರಾಮ ಪಂಚಾತಿಯಿಗೆ ಸೇರಿದ ಆಸ್ತಿ ಎಂದು ನಾಮಫಲಕ ಹಾಕಿಸಿದ್ದಾರೆ.
ಬೆಂಗಳೂರು ಮೂಲದ ಉದ್ಯಮಿಗಳಾದ ಮಹಮ್ಮದ್ ಫಾರೂಕ್ ಮತ್ತು ಮಹಮ್ಮದ್ ಸಲೀಂ ಎಂಬುವರ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದೆ. ದರ್ಶನ್ ಪುಟ್ಟಣ್ಣಯ್ಯ ಮುರ್ತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಮಾತ್ರವಲ್ಲದೆ ಸರ್ಕಾರಿ ಜಾಗವನ್ನು ಉಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಏನಿದು ವಿವಾದ?: ಮಹಮ್ಮದ್ ಫಾರೂಕ್ ಮತ್ತು ಮಹಮ್ಮದ್ ಸಲೀಂ ಎಂಬುವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಚಂದಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಗುಳಿ ಗ್ರಾಮದಲ್ಲಿ ಏಳು ಎಕರೆ ಜಮೀನು ಖರೀದಿಸಿದ್ದಾರೆ. ಜತೆಗೆ ರೆಸಾರ್ಟ್ ಮಾಡಿದ್ದಾರೆ. ಆದರೆ ಇವರು ಅಕ್ಕಪಕ್ಕದಲ್ಲಿದ್ದ 20 ಎಕರೆಗೂ ಅಧಿಕ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದರು. ಪ್ರಮುಖವಾಗಿ ಸರ್ವೇ ನಂಬರ್ 94/1ರಲ್ಲಿ 4 ಎಕರೆ ಜಮೀನನ್ನು ಚಂದಗಾಲು ಗ್ರಾಪಂ ವ್ಯಾಪ್ತಿಗೆ ಸೇರಿದ ನಿವೇಶನರಹಿತರಿಗೆ ನೀಡಲು 2019ರಲ್ಲಿ ಮಂಜೂರು ಮಾಡಲಾಗಿತ್ತು. ಮಾತ್ರವಲ್ಲದೆ ಈ ಜಾಗದಲ್ಲಿ 115 ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ ಸಿದ್ಧಪಡಿಸಿಕೊಳ್ಳಲಾಗಿತ್ತು.
ಈ ನಡುವೆ ಉದ್ಯಮಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆನ್ನುವ ಮಾಹಿತಿ ಕೇಳಿಬಂದಿತ್ತು. ಈ ಜಾಗದಲ್ಲಿ ಜಾಗದಲ್ಲಿ ವಿಲ್ಲಾಗಳನ್ನು ನಿರ್ಮಿಸಿ ಮಾರಾಟ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತೆನ್ನಲಾಗಿದೆ. ಒತ್ತುವರಿ ಪ್ರಶ್ನಿಸಿದ್ದಕ್ಕೆ ರೈತರು ಹಾಗೂ ಅಧಿಕಾರಿಗಳಿಗೆ ಧಮ್ಕಿ ಹಾಕಲಾಗಿತ್ತೆನ್ನುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ವಿಷಯ ತಿಳಿದು ಬುಧವಾರ ಸ್ಥಳಕ್ಕಾಗಮಿಸಿದ ಶಾಸಕ ದರ್ಶನ್ ಪುಟ್ಟಣಯ್ಯ, ಅಧಿಕಾರಿ ಹಾಗೂ ಗ್ರಾಪಂ ಸಿಬ್ಬಂದಿ ನೆರವಿನಿಂದ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್ ತೆರವುಗೊಳಿಸಿ ಸುಮಾರು 20 ಎಕರೆ ಜಮೀನನ್ನು ವಶಕ್ಕೆ ಪಡೆದಿದ್ದಾರೆ. ಜತೆಗೆ ಇದು ಗ್ರಾಪಂಗೆ ಸೇರಿದ ಆಸ್ತಿ ಎಂದು ನಾಮಫಲಕ ಹಾಕಿಸಿದ್ದಾರೆ.
ಈ ವೇಳೆ ಮಂಡ್ಯ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಸೇರಿದಂತೆ ಗ್ರಾಪಂ ಅಧಿಕಾರಿಗಳಿದ್ದರು.
ಸರ್ಕಾರಿ ಜಾಗ ಒತ್ತುವರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ವೇ ಮಾಡಿಸಿ ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಿ ಗ್ರಾಪಂ ವಶಕ್ಕೆ ಪಡೆಯಲಾಗಿದೆ. ಈ ರೀತಿಯ ಸರ್ಕಾರಿ ಜಾಗವನ್ನು ದುರುಪಯೋಗಪಡಿಸಿಕೊಂಡಿರುವ ಸಾಕಷ್ಟು ಪ್ರಕರಣಗಳಿವೆ. ಅವುಗಳನ್ನು ತೆರವುಗೊಳಿಸಲಾಗುವುದು. ಇನ್ನು ಬಿಳಗುಲಿ ಗ್ರಾಮದಲ್ಲಿ ನಿರ್ಮಿಸಿರುವ ರೆಸಾರ್ಟ್‌ಗೆ ಪರವಾನಗಿ ಇಲ್ಲವೆಂದು ಮಾಹಿತಿ ಇದೆ. ಆದ್ದರಿಂದ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು.ದರ್ಶನ್ ಪುಟ್ಟಣ್ಣಯ್ಯಮೇಲುಕೋಟೆ ಶಾಸಕ