ಶಾಸಕ ಚನ್ನಾರೆಡ್ಡಿ, ಪುತ್ರನನ್ನು ಬಂಧಿಸಿ

07 DVD 09
ಯಾದಗಿರಿ ಶಾಸಕ ಚನ್ನಾರೆಡ್ಡಿ ತನ್ನೂರು ಹಾಗೂ ಅವರ ಪುತ್ರ ಹಂಪನಗೌಡನನ್ನು ಬಂಧಿಸಲು ಆಗ್ರಹಿಸಿ ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ರಾಜ್ಯ ಛಲವಾದಿ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮನವಿ ಸಲ್ಲಿಸಿದವು. ಮುಖಂಡರಾದ ಶಿದ್ಲಿಂಗಪ್ಪ ಕಾಕರಗಲ್, ನರಸಣ್ಣ ನಾಯಕ, ಮಹಾಂತೇಶ ಭವಾನಿ, ದುರಗಪ್ಪ ಬಡಿಗೇರ, ಮಂಜುನಾಥ ಹೇರುಂಡಿ, ಕ್ರಾಂತಿಕುಮಾರ ರಾಯಚೂರಕರ್, ಸಚ್ಚಿದಾನಂದ ಶಾಖಾಪುರ ಇದ್ದರು.
Published on

ದೇವದುರ್ಗ: ಯಾದಗಿರಿ ಪಿಎಸ್‌ಐ ಪರಶುರಾಮ ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಚನ್ನಾರೆಡ್ಡಿ ತನ್ನೂರು ಹಾಗೂ ಆತನ ಪುತ್ರ ಹಂಪನಗೌಡನನ್ನು ಬಂಧನ ಮಾಡುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ರಾಜ್ಯ ಛಲವಾದಿ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಂಗಳವಾರ ಜಂಟಿಯಾಗಿ ಪ್ರತಿಭಟನೆ ನಡೆಸಿದವು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ ಮಾತನಾಡಿ, ಯಾದಗಿರಿ ಶಾಸಕ ಚನ್ನಾರೆಡ್ಡಿ ಹಾಗೂ ಆತನ ಪುತ್ರ ಹಂಪನಗೌಡನ ಕಿರುಕುಳದಿಂದ ದಕ್ಷ ಪಿಎಸ್‌ಐ ಪರಶುರಾಮನ ಸಾವಾಗಿದೆ. ಠಾಣೆಗೆ ಬಂದು 7ತಿಂಗಳಲ್ಲೇ ಶಾಸಕರು ವರ್ಗಾವಣೆ ಮಾಡಿಸಿದ್ದಾರೆ. ಅದೇ ಸ್ಥಳದಲ್ಲಿ ಮುಂದುವರಿಸಲು 30ಲಕ್ಷ ರೂ. ಬೇಡಿಕೆ ಇಟ್ಟಿದ್ದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.

ರಾಜ್ಯದಲ್ಲಿ ವರ್ಗಾವಣೆ ಧಂದೆ ವ್ಯಾಪಕವಾಗಿ ನಡೆದಿದ್ದು ಇದರಲ್ಲಿ ಸಚಿವರು, ಶಾಸಕರು ಭಾಗಿಯಾಗಿದ್ದಾರೆ. ಸರ್ಕಾರಿ ನೌಕರರಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ದಕ್ಷ, ಪ್ರಾಮಾಣಿಕ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಲು ಆಗದಂಥ ಸ್ಥಿತಿ ನಿರ್ಮಾಣವಾಗಿದೆ. ಪಿಎಸ್‌ಐ ಪರಶುರಾಮಗೆ ಶಾಸಕರು ಬೆದರಿಕೆ ಹಾಕಿದ್ದರಿಂದ ಅವರ ಸಾವಾಗಿದೆ ಎಂದು ಆರೋಪಿಸಿದರು.

ಕೂಡಲೇ ಶಾಸಕ ಚನ್ನಾರೆಡ್ಡಿ ಹಾಗೂ ಅವರ ಮಗ ಹಂಪನಗೌಡನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು. ಪಿಎಸ್‌ಐ ಪರುಶುರಾಮ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ, ಸೂಕ್ತ ರಕ್ಷಣೆ ಒದಗಿಸಬೇಕು. ಆತನ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಚಂದ್ರಶೇಖರ ಛಲವಾದಿ, ರಂಗನಾಥ ತುಪ್ಪದ, ವೀರೇಶ ಕೊಳ್ಳಿ, ಮರಿಲಿಂಗಪ್ಪ ಹೆಗ್ಗಡದಿನ್ನಿ, ಮಲ್ಲಪ್ಪ, ಸಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net