ಮನೆ ಹಂಚಿಕೆ ಅವ್ಯವಹಾರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಶಾಸಕ ಸಿಮೆಂಟ್ ಮಂಜು ಆಗ್ರಹ

Published on

ಹಾಸನ: ಸಕಲೇಶಪುರ, ಬೇಲೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಪಿಎಂಎಐ ಯೋಜನೆಯಡಿ ಅಕ್ರಮ ಎಸಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ, ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಒತ್ತಾಯಿಸಿದರು.

ವಸತಿ ಯೋಜನೆಯಲ್ಲಿ ನಡೆದಿರುವ ಅಕ್ರಮಕ್ಕೆ ಪಿಡಿಒ, ಇಒ, ಸಿಸಿಒ, ಹೌಸಿಂಗ್ ಬೋರ್ಡ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಇಲ್ಲದಿದ್ದರೆ ಜಿಪಂ ಸಿಇಒ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

20 ದಿನಗಳ ಹಿಂದೆ ಅಕ್ರಮ ಬಯಲಾಗಿದೆ. ಫಲಾನುಭವಿ ಒಬ್ಬರಾದರೆ, ಹಣವನ್ನು ಬೇರೆಯವರ ಖಾತೆಗೆ ಡೆಪಾಸಿಟ್ ಮಾಡಿ ಪಡೆಯಲಾಗಿದೆ. ಸುಮಾರು 3 ಕೋಟಿ ರೂ. ದುರುಪಯೋಗ ಆಗಿದೆ. ಇದಕ್ಕೆ ಮೂಲ ಕಾರಣ ರಾಜೇಶ್. ಫಲಾನುಭವಿಗಳ ಪಟ್ಟಿಯನ್ನು ಪಿಡಿಒ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುತ್ತಾರೆ. ಅಲ್ಲಿಂದ ಇಒ ನಂತರ ಯೋಜನಾ ನಿರ್ದೇಶಕರ ಲಾಗಿನ್‌ಗೆ ಬರಲಿದೆ. ಕಡೆಗೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ಹಣ ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು.

ಈಗ ಅಕ್ರಮ ನಡೆದು ಹೋಗಿದ್ದು, ಭಾಗಿಯಾಗಿರುವವರ ತಲೆದಂಡ ಆಗಲೇಬೇಕು. ಮೂರು ಲಾಗಿನ್ ಮೂಲಕ ಪಾಸ್ ಆಗಿ, 200 ಮನೆ ಹಣ ದುರ್ಬಳಕೆ ಆಗಿದ್ದರೂ ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಏಕೆ ಕ್ರಮ ಆಗಿಲ್ಲ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ನಮ್ಮ ಕ್ಷೇತ್ರಕ್ಕೆ ಒಂದೇ ಒಂದು ಮನೆ ಕೊಟ್ಟಿಲ್ಲ. ಆದರೆ ಕೇಂದ್ರದ ಯೋಜನೆಯಲ್ಲಿ ಲೂಟಿ ಆಗಿರೋದು ಸರ್ಕಾರ, ಮಂತ್ರಿಗಳಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ತಪ್ಪು ಮಾಡಿರುವವರ ತಲೆ ದಂಡದ ಜತೆಗೆ ಕ್ರಮ ಆಗಲೇಬೇಕು. ಅವರ ಅಮಾನತು ಆಗಬೇಕು ಎಂದು ಒತ್ತಾಯಿಸಿದರು.

ಈ ಅಕ್ರಮದಲ್ಲಿ ಮನೆ ಯಾರದ್ದೋ ಆದರೆ, ಹಣ ಬೇರೆಯವರ ಖಾತೆಗೆ ಹೋಗಿದೆ. ಮನೆ ಫೋಟೋ ಸಹ ನಕಲಿ, ರಾಜೇಶ್ ತಪ್ಪು ಮಾಡಿದ್ದಾರೆ ಎಂದರೆ ಪಿಡಿಒ, ತಾಪಂ ಇಒ, ಜಿಪಂ ಯೋಜನಾ ನಿರ್ದೇಶಕ, ಮುಖ್ಯ ಲೆಕ್ಕಾಧಿಕಾರಿ ಗಮನಿಸಬೇಕಿತ್ತು. ತಪ್ಪು ಮಾಡಿರುವವರ ಮೇಲೆ ಸಿಇಒ ಏಕೆ ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದರು.

ಶೀಘ್ರವೇ ತಪ್ಪು ಮಾಡಿರುವವರ ವಿರುದ್ಧ ಕ್ರಮ ಆಗದೆ ಇದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಬೇಲೂರು ಶಾಸಕ ಸುರೇಶ್ ಮಾತನಾಡಿ, ಈ ಹಗರಣ ಜಿಲ್ಲೆಗೆ ದೊಡ್ಡ ಕಪ್ಪುಚುಕ್ಕೆ, ಜಿಪಂ ಸಿಇಒ ಸೇರಿ ಅನೇಕರು ಭಾಗಿಯಾಗಿದ್ದಾರೆ. ಇದಕ್ಕೆ ಮೂಲ ಕಾರಣ ಜಿಪಂ ಸಿಇಒ ಎಂದು ದೂರಿದರು.

ಬಾಣಾವರದಲ್ಲಿ 93 ಮನೆ ಸೇರಿ 340 ಮನೆ ಹಂಚಿಕೆಯಲ್ಲಿ ದುರ್ಬಳಕೆ ಆಗಿದೆ. ಸಿಎಂ ಸಿದ್ದರಾಮಯ್ಯ ಅವರು ನಮ್ಮದು ಕಪ್ಪು

ಚುಕ್ಕೆ ಇಲ್ಲದ ಆಡಳಿತ ಅಂತಾರೆ, ಅವರೂ ಸೇರಿದಂತೆ ಉಸ್ತುವಾರಿ ಸಚಿವರು ಗಮನ ಕೊಡಬೇಕು. ಕಂದಾಯ ಇಲಾಖೆಯಲ್ಲಿ

ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಲ್ಲಿ 3-4 ಕೋಟಿ ರೂ. ಅವ್ಯವಹಾರ ಆಗಿದ್ದರೂ ಏಕೆ ಕ್ರಮ ಆಗಿಲ್ಲ ಎಂದು ಕೇಳಿದ ಅವರು, ಸಿಇಒ ಅವರನ್ನು ಹಿಡಿದು ಎಲ್ಲರನ್ನೂ ಅಮಾನತು ಮಾಡಿ ನಂತರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಕೂಡಲೇ ಸಿಎಂ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್, ಉಸ್ತುವಾರಿ ಸಚಿವರು ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್‌ಶೆಟ್ಟಿ, ಗಿರೀಶ್ ನಂಬಿಹಳ್ಳಿ, ಮುಖಂಡ ಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net