ಸೆಕೆಂಡ್ಸ್ ಹಾವಳಿಯಿಂದಲೇ ರಾಜ್ಯದ ಮದ್ಯ ಮಾರಾಟ ಕುಸಿತ

MLA C.S. Nadagowda Appaji, municipal councilors, officials meeting, seconds problem, state liquor, sales decline
ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪುರಸಭೆ ಸದಸ್ಯರು, ಅಧಿಕಾರಿಗಳ ಸಭೆಯಲ್ಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿದರು. ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ವಿಜಯ ಮೆಕ್ಕಳಕಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಇತರರಿದ್ದರು.
Published on

ಮುದ್ದೇಬಿಹಾಳ: ಬೇರೆ ರಾಜ್ಯಗಳ ಮದ್ಯ ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದರಿಂದಲೇ ರಾಜ್ಯದ ಮದ್ಯ ಮಾರಾಟದ ಪ್ರಮಾಣ ಕುಸಿತವಾಗಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರಸಭೆ ಸದಸ್ಯರು, ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಗೋವಾ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಿಂದ ಸೆಕೆಂಡ್ಸ್ ಮದ್ಯ ಪೂರೈಕೆ ಆಗುತ್ತಿದೆ. ನಿಖರವಾಗಿ ಕೆಲವು ವಾಹನಗಳನ್ನು ಸೀಜ್ ಕೂಡ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ರೆವಿನ್ಯೂ ಕಡಿಮೆ ಆಗಿಲ್ಲ ಎಂದರು.

ಪಟ್ಟಣದ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಯಾವುದೇ ಕಾಮಗಾರಿಯನ್ನು ಬಂದ್ ಮಾಡಿಸುವಂತೆ ನಮ್ಮ ಕಾರ್ಯಕರ್ತರಾಗಲಿ, ಮುಖಂಡರಾಗಲಿ ಹೇಳಿಲ್ಲ. ಆದರೆ ಎಸ್ಟಿಮೇಟ್ ಪ್ರಕಾರ ಗುತ್ತಿಗೆದಾರರಿಂದ ಕೆಲಸ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ಹೇಳಿದರು.

ಎಸ್ಟಿಮೇಟ್‌ನಲ್ಲಿರುವುದೇ ಒಂದು ಹಿಂದಿನವರು ಮಾಡಿಸುತ್ತಿರುವುದೇ ಮತ್ತೊಂದಾಗಿತ್ತು. ಹಾಡಹಗಲೇ ಲೂಟಿ ಮಾಡುವ ಕಾರ್ಯ ನಡೆದಿತ್ತು. ಸರ್ಕಾರದ ಹಣ ಪೋಲಾಗಬಾರದೆಂದು ಎಸ್ಟಿಮೇಟ್‌ನಂತೆ ಕೆಲಸ ಮಾಡಬೇಕು ಎಂದು ಸೂಚಿಸಿದ್ದೇವೆ ಹೊರತು ಎಲ್ಲೂ ಕೆಲಸ ನಿಲ್ಲಿಸುವಂತೆ ಹೇಳಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಶಾಸಕರು ಉತ್ತರಿಸಿದರು.

ತಾಲೂಕಿನಲ್ಲಿ ಹೆಚ್ಚುವರಿಯಾಗಿ 300 ಮನೆಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ತಮ್ಮ ಅವಧಿಯಲ್ಲಿ ಹಂಚಿಕೆಯಾಗಿದ್ದ ಮನೆಗಳ ಪಟ್ಟಿಯಲ್ಲಿ ಹೊಸದಾಗಿ ಯಾರದ್ದು ಸೇರ್ಪಡೆ ಮಾಡಲಾಗಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ಪಟ್ಟಣ ಬೆಳೆದಿದ್ದು 24*7 ಕುಡಿಯುವ ನೀರಿನ ಯೋಜನೆಗಾಗಿ ಟೆಂಡರ್ ಕರೆಯಲು ತಿಳಿಸಿದ್ದೇವೆ. ಪಟ್ಟಣದ ಹಡಲಗೇರಿ ರಸ್ತೆಯಲ್ಲಿ ಕಟ್ಟುತ್ತಿರುವ ಮನೆಗಳಿಗೆ ಎಂ ಸ್ಯಾಂಡ್ ಬಳಸದಂತೆ ಸೂಚಿಸಿದ್ದೇವೆ. ನದಿ ಮರಳು ಅಥವಾ ಲಿಂಗಸಗೂರು ಭಾಗದಲ್ಲಿ ದೊರೆಯುವ ಮರಳು ಬಳಸುವುದಕ್ಕೆ ತಿಳಿಸಿದ್ದೇವೆ ಎಂದರು.

ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಮಾತನಾಡಿ, ಕಳೆದ ವರ್ಷದಿಂದ ಆಗುತ್ತಿರುವ ಕೆಲಸಗಳನ್ನು ತಡೆಯಿಲ್ಲದೆ ನಿರ್ವಹಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದೇವೆ. ಒಂದು ವೇಳೆ ಕಾಮಗಾರಿ ಮಾಡದೆ ವಿಳಂಬ ಮಾಡಿದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಡಿಸೆಂಬರ್‌ವರೆಗೆ ತೆರಿಗೆ ಸಂಗ್ರಹ ಗುರಿ ನೀಡಿದ್ದು ಕಟ್ಟುನಿಟ್ಟಾಗಿ ತೆರಿಗೆ ವಸೂಲಿಗೆ ಸೂಚಿಸಿದ್ದೇವೆ. ಅಭಿವೃದ್ಧಿಪಡಿಸದ ಲೇಔಟ್‌ಗಳ ಉತಾರಗಳನ್ನು ನೀಡದಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದರು.'

ಅಬಕಾರಿ ಅಧಿಕಾರಿಗೆ ಸೂಚನೆ
ಅಬಕಾರಿ ಇಲಾಖೆಯ ಅಧಿಕಾರಿ ಅಮಾನತುಗೊಂಡು ಮರಳಿ ಇಲಾಖೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ನಾಡಗೌಡರು, ಸರ್ಕಾರ ಅವರನ್ನು ಪೋಸ್ಟ್ ಮಾಡಿದೆ. ಅವರಿಗೆ ನಿಮ್ಮ ಕೆಲಸ ನೀವು ಸರಿಯಾಗಿ ಮಾಡಿ ಎಂದು ಹೇಳಿ ಕಳಿಸಿದ್ದೇನೆ ಎಂದರು.

ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅನಿಲಕುಮಾರ ಮುದ್ದಾ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಮುಖಂಡ ಗೋಪಿ ಮಡಿವಾಳರ, ಪುರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪುರಸಭೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net