

ಮುದ್ದೇಬಿಹಾಳ : ಒಳಮೀಸಲಾತಿ ಅನುಷ್ಠಾನಗೊಳಿಸಲು ಆಗ್ರಹಿಸಿ ನ. 22ರಂದು ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕು ಕೂಡಲಸಂಗಮ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯಿಂದ ಪಟ್ಟಣದ ಹುಡ್ಕೋದಲ್ಲಿರುವ ಶಾಸಕ ಸಿ.ಎಸ್. ನಾಡಗೌಡರ ನಿವಾಸದವರೆಗೆ ‘ನಮ್ಮ ನಡೆ ಒಳ ಮೀಸಲಾತಿ ಕಡೆ’ ಹೆಸರಿನಲ್ಲಿ ಪಾದಯಾತ್ರೆ ಪ್ರಾರಂಭಿಸಲಾಗುತ್ತದೆ ಎಂದು ತಾಲೂಕು ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ, ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಬಸವರಾಜ ಪೂಜಾರಿ ಸಿದ್ದಾಪುರ, ಕೆ.ಬಿ. ದೊಡಮನಿ ವಕೀಲರು, ಭೀಮರಾಯ ಹುಲ್ಲೂರ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೋರಾಟದ 5 ದಶಕಗಳ ಹೆಜ್ಜೆ ಗುರುತುಗಳೊಂದಿಗೆ ಚಮ್ಮಾಹುಳಿಗೆ (ಬಸವಣ್ಣನ ಭಾವಚಿತ್ರ, ವಿಭೂತಿ, ರುದ್ರಾಕ್ಷಿ, ಗುಂಡಗಡಗಿ, ಚರ್ಮದ ಚಪ್ಪಲಿ ಇರುವ ಅಲಂಕೃತ ಪ್ರತಿಕೃತಿ) ಹೊತ್ತ ಪಾದಯಾತ್ರೆಯು ನ.25ರಂದು ಶಾಸಕರ ನಿವಾಸ ಮುತ್ತಿಗೆ ಹಾಕಿ ಬೇಡಿಕೆ ಈಡೇರಿಕೆಗೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಲಾಗುತ್ತದೆ. ಇದಾದ ನಂತರ ತಹಸೀಲ್ದಾರ್ ಕಚೇರಿಗೆ ಆಗಮಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಲಾಗುತ್ತದೆ ಎಂದರು.
ಸುಪ್ರಿಂಕೋರ್ಟ್‌ನ 7 ನ್ಯಾಯಾಧೀಶರ ಪೀಠವು ಒ ಮೀಸಲಾತಿ ಸಮರ್ಥಿಸಿ ಅನುಷ್ಠಾನ ರಾಜ್ಯಗಳಿಗೆ ಸೇರಿದ್ದು ಎಂದು ಹೇಳಿ ಅಂತಿಮ ತೀರ್ಮಾನ ಪ್ರಕಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರಿಂಕೋರ್ಟ್ ನಿಲುವು ಸ್ವಾಗತಿಸಿದ್ದಾರೆಯೇ ಹೊರತು ಅನುಷ್ಠಾನಕ್ಕೆ ಮುಂದಾಗಿಲ್ಲ. ಇದು ಸಿದ್ದರಾಮಯ್ಯ ತಳಸಮುದಾಯದವರಿಗೆ ಮಾಡಿರುವ ಚಾರಿತ್ರಿಕ ದ್ರೋಹ ಎಂದರು.
ಪ್ರಮುಖರಾದ ತಿಪ್ಪಣ್ಣ ಮಾದರ, ಮುತ್ತಪ್ಪ ದೊಡಮನಿ, ಹಣಮಂತ ಚಿರ್ಚಿನಕಲ್ಲ, ಶೇಖರ ಆಲೂರ, ಸಿದ್ದಪ್ಪ ಬಿದರಕುಂದಿ, ಆನಂದ ಮುದೂರ ಇನ್ನಿತರರು ಇದ್ದರು.