

ನರಗುಂದ: ಕೇಂದ್ರ ಸರ್ಕಾರವು ನರೇಂದ್ರ ಮೋದಿ ನೇತೃತ್ವದಲ್ಲಿ ನೂತನ ಸಂಸತ್ ಭವನದಲ್ಲಿ ಸೋಮವಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಯಿಂದ ದೇಶದ ಶೇ.33ರಷ್ಟು ಮಹಿಳೆಯರಿಗೆ ರಾಜಕೀಯವಾಗಿ ಅನುಕೂಲವಾಗಲಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ಹೆಮ್ಮೆಯ ಹಾಗೂ ಸ್ಮರಣೀಯ ದಿನವಾಗಿದೆ. ಆಧುನಿಕ ಭಾರತಕ್ಕೆ ಹೊಸಸ್ಪರ್ಶ ನೀಡಲು ಪೇಪರ್‌ಲೆಸ್ ನೂತನ ಸಂಸತ್ ಭವನದಲ್ಲಿ ಕಲಾಪ ಆರಂಭಿಸಿರುವುದು ನಮ್ಮೆಲ್ಲರ ಸುದೈವ. ನೂತನ ಕಟ್ಟಡ ನಿರ್ಮಿಸಿದ 30 ಸಾವಿರಕ್ಕೂ ಅಧಿಕ ಕಾರ್ಮಿಕರ ಪರಿಶ್ರಮದ ವಿಡಿಯೋವನ್ನು ಸಂಸತ್ ಭವನದಲ್ಲಿ ಪ್ರಸಾರಗೊಳಿಸಿ, ಪ್ರತಿಯೊಬ್ಬ ಕಾರ್ಮಿಕರ ಶ್ರಮವನ್ನು ಪ್ರಧಾನಿ ಶ್ಲಾಘಿಸಿದ್ದಾರೆ ಎಂದು ಹೇಳಿದರು.
ಹಳೇಯ ಪಾರ್ಲಿಮೆಂಟ್ ಕಟ್ಟಡದಲ್ಲಿ 4 ಸಾವಿರಕ್ಕೂ ಹೆಚ್ಚು ಕಾನೂನುಗಳನ್ನು ರಚಿಸಲಾಗಿದೆ. ಒಟ್ಟು 5 ದಿನ ಜರುಗುವ ಈ ವಿಶೇಷ ಅಧಿವೇಶನದಲ್ಲಿ ಎಲ್ಲ ಸದಸ್ಯರಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ. ಕಾರ್ಮಿಕರ ಶ್ರಮ ಪ್ರಶಂಸಿಸಿದ ಬಳಿಕ ಶೇ.33ರಷ್ಟು ಮಹಿಳೆಯರ ಮೀಸಲಾತಿಯ ಮಸೂದೆ ಮಂಡಿಸಲಾಗಿದೆ. ಸಂಸತ್ ಇತಿಹಾಸದಲ್ಲಿಯೇ ಇದೊಂದು ಅಮೃತ ಘಳಿಗೆ. ಈ ಐತಿಹಾಸಿಕ ನಿರ್ಧಾರದಿಂದ ಲೋಕಸಭೆಯಲ್ಲಿ ಮಹಿಳೆಯರಿಗೆ 181 ಸ್ಥಾನಗಳು ಸಿಗಲಿವೆ. ಈ ಬಗ್ಗೆ ಸ್ಪೀಕರ್ ಓಂಪ್ರಕಾಶ ಬಿರ್ಲಾ ಅಭಿನಂದನೆ ಸಲ್ಲಿಸಿರುವುದು ಕಾಂಗ್ರೆಸ್‌ನವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನ ಲೋಕಸಭೆ ಸದಸ್ಯ ಅಧೀರ್ ರಂಜನ್ ಚೌಧರಿ ಮಹಿಳೆಯರ ಮೀಸಲಾತಿ ಮಸೂದೆಯನ್ನು ನಮ್ಮ ಸರ್ಕಾರವೇ ಜಾರಿಗೊಳಿಸಿತ್ತು ಎಂದು ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ತನ್ನ ಭಂಡತನ ಪ್ರದರ್ಶಿಸುತ್ತಿದೆ. ವಿನಾಕಾರಣ ಟೀಕೆ ಮಾಡುವುದರ ಬದಲು ಕಾರ್ಮಿಕರಿಗೆ ನರೇಂದ್ರ ಮೋದಿ ಅವರು ಸಲ್ಲಿಸಿರುವ ಗೌರವದ ಸೂಕ್ಷ್ಮತೆ ಅರಿಯಬೇಕಿತ್ತು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.