

ನರಗುಂದ: ದೇಶಕ್ಕೆ ಯೋಧರು, ರೈತರು ಎಷ್ಟು ಮುಖ್ಯವೋ ಸಂಸ್ಕಾರಯುತ ಸದೃಢ ದೇಶವನ್ನು ನಿರ್ಮಿಸಲು ಶಿಕ್ಷಕರ ಪಾತ್ರವೂ ಅಷ್ಟೇ ಮುಖ್ಯ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕ್ರೀಡಾಕೂಟ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಅಂಕಗಳಿಗೋಸ್ಕರ ಶಿಕ್ಷಣ ನೀಡದೆ, ಪೂರ್ವಜರು ಹಾಕಿಕೊಟ್ಟಿರುವ ಒಳ್ಳೆಯ ಆಚಾರ, ವಿಚಾರ, ಸುಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಜಾಗೃತಿಯ ಜತೆಗೆ ಅರಿವು, ದೇಶಾಭಿಮಾನ ಬೆಳೆಸಬೇಕು. ಸರ್ವಾಧಿಕಾರಿ ಮನೋಭಾವನೆ, ದಬ್ಬಾಳಿಕೆಯನ್ನು ಎದುರಿಸಿ ಕರುನಾಡಿನ ನೆಲ, ಜಲದ ಬಗ್ಗೆ ಪ್ರತಿಯೊಬ್ಬರೂ ಕೆಚ್ಚೆದೆಯಿಂದ ಹೋರಾಟ ನಡೆಸಬೇಕು ಎಂದರು.
ತಾಲೂಕಿನ ಕೆಲವು ಶಿಕ್ಷಕರು ವೈಯಕ್ತಿಕ ಕಾರಣಗಳಿಂದ ಪ್ರತ್ಯೇಕ ಪಂಗಡಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಜ್ಞಾನ ದೇಗುಲವಿದು. ಎಲ್ಲರೂ ಕೈಮುಗಿದು ಬನ್ನಿ ಎಂದು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕಾದ ಶಿಕ್ಷಕರೇ ಈ ರೀತಿ ವರ್ತಿಸುತ್ತಿರುವುದು ಬೇಸರದ ಸಂಗತಿ ಎಂದರು.
ಡಿಡಿಪಿಐ ಎಂ.ಎ. ರಡ್ಡೇರ ಮಾತನಾಡಿ, ದೇಶದ ಭವಿಷ್ಯ ವರ್ಗದ ಕೊಣೆಯಲ್ಲಿ ಅಡಗಿದೆ. ಶಿಕ್ಷಕರು ಮಕ್ಕಳಲ್ಲಿರುವ ಸೂಕ್ಷ್ಮಗಳನ್ನು ಗಮನಿಸಿ, ಗ್ರಹಿಸಬೇಕು. ವರ್ತನೆಯಲ್ಲಿ ಪರಿವರ್ತನೆ ಕಾಣುವ ರೀತಿಯಲ್ಲಿ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್. ಮಜ್ಜಗಿ ಮಾತನಾಡಿ, ಗುರು, ಶಿಷ್ಯರ ಸಂಬಂಧ ಸಂತ ಶಿಶುನಾಳ ಶರೀಷ- ಗುರುಗೋವಿಂದ ಭಟ್ಟರಂತಿರಬೇಕು ಎಂದರು. ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿದರು. ವಿರಕ್ತಮಠದ ಶಿವಕುಮಾರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಎನ್.ಆರ್. ನಿಡಗುಂದಿ, ಆನಂದ ಭೋವಿ, ಪುರಸಭೆ ಸದಸ್ಯೆ ಭಾವನಾ ಪಾಟೀಲ, ಕಾಶವ್ವ ಮಳಗಿ, ರೇಣವ್ವ ಕಲ್ಲಾರಿ, ಝಡ್.ಎಂ. ಖಾಜಿ, ಪಿ.ಸಿ. ಕಲಹಾಳ, ಎಸ್.ಜಿ. ಮಣ್ಣೂರಮಠ, ಎಂ.ಪಿ. ಕುಲಕರ್ಣಿ ಉಪಸ್ಥಿತರಿದ್ದರು. ಶಿಕ್ಷಕ ಪ್ರಮೋದ ಜಾಧವ ನಿರೂಪಿಸಿದರು. ಸಿ.ಎಂ. ಕೊಳ್ಳಿಯವರ ವಂದಿಸಿದರು.