

ಮುದ್ದೇಬಿಹಾಳ: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಸಮುದಾಯದ ಸದಸ್ಯರು ಹುಡ್ಕೋದಲ್ಲಿರುವ ಶಾಸಕ, ಕರ್ನಾಟಕ ಸಾಬೂನು, ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನಗಳು ಪೊಲೀಸರು ಮಧ್ಯಪ್ರವೇಶಿಸಿದ್ದರಿಂದ ಪಟ್ಟಣದಲ್ಲಿ ಸೋಮವಾರ ವಿಲಗೊಂಡವು.
ಆದರೂ ಹೋರಾಟಗಾರರು ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳ ಮೂಲಕ ಶಾಸಕರ ನಿವಾಸ ಸಮೀಪದಲ್ಲಿರುವ ಹುಡ್ಕೋದ ಹೇಮರಡ್ಡಿ ಮಲ್ಲಮ್ಮ ವೃತ್ತದವರೆಗೂ ಪ್ರತಿಭಟನಾ ರ‌್ಯಾಲಿಯೊಂದಿಗೆ ಆಗಮಿಸಿ, ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರನ್ನು ಕರೆಸಿಕೊಂಡು ಶಾಸಕರು, ಸರ್ಕಾರಕ್ಕೆ ನೀಡಬೇಕಿದ್ದ ಮನವಿಗಳನ್ನು ಸಲ್ಲಿಸಿದರು.
ಶಾಸಕರ ನಿವಾಸಕ್ಕೆ ಹೋಗುವ ರಸ್ತೆಯುದ್ದಕ್ಕೂ, ಪಟ್ಟಣದ ಹಲವೆಡೆ ಬ್ಯಾರಿಕೇಡ್ ಹಾಕಿ, ಜಿಲ್ಲೆಯ ವಿವಿಧ ಠಾಣೆಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲು ಏರ್ಪಡಿಸಲಾಗಿತ್ತು.
ಹೋರಾಟದ ನೇತೃತ್ವ ವಹಿಸಿದ್ದ ಬಸವರಾಜ ಪೂಜಾರಿ ಸಿದ್ದಾಪೂರ ಮಾತನಾಡಿ, ಶಾಸಕ ನಾಡಗೌಡರಿಗೆ ನಮ್ಮ ಬಗ್ಗೆ ಹೆದರಿಕೆ ಇರುವುದರಿಂದಲೇ ನಮ್ಮ ಹೋರಾಟ ಹತ್ತಿಕ್ಕಲು ಪೊಲೀಸ್ ಯಂತ್ರ ದುರ್ಬಳಕೆ ಮಾಡಿಕೊಂಡಿದ್ದಾರೆ. ಪೊಲೀಸರು ಹಳ್ಳಿಗಳಿಂದ ಬಂದ ದಲಿತ ಸಮುದಾಯದವರಿಗೆ ಸುಳ್ಳು ಹೇಳಿ ಹೋರಾಟದಲ್ಲಿ ಭಾಗವಹಿಸದಂತೆ ತಡೆದಿದ್ದಾರೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಗೆ ನಾಡಗೌಡರು ಧ್ವನಿ ಎತ್ತದಿದ್ದರೆ ಮತಕ್ಷೇತ್ರದಲ್ಲಿ ಅವರು ಕಾಣಿಸಿಕೊಳ್ಳುವಲ್ಲೆಲ್ಲ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಎಚ್ಚರಿಸಿದರು.
ಮುಖಂಡರಾದ ಹರೀಶ ನಾಟೀಕಾರ, ಕೆ.ಬಿ.ದೊಡಮನಿ, ಡಿ.ಬಿ.ಮುದೂರ, ಕೆಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಿಸಾಲದಾರ, ಆನಂದ ಮುದೂರ, ತಿಪ್ಪಣ್ಣ ವಂದಾಲ, ಧರ್ಮರೆಡ್ಡಿ ಇಳಕಲ್ ಮತ್ತಿತರರು ಮಾತನಾಡಿ, ಶಾಸಕ ನಾಡಗೌಡರಿಗೆ ಅನಾರೋಗ್ಯವಿದ್ದರೆ ತಮ್ಮ ಪರ ಯಾರನ್ನಾದರೂ ಕಳಿಸಿ ಮನವಿ ಸ್ವೀಕರಿಸಬಹುದಿತ್ತು. ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿಗೊಳಿಸುವುದಾಗಿ ಕೊಟ್ಟಿದ್ದ ಮಾತನ್ನು ತಪ್ಪಿದ್ದಾರೆ ಎಂದು ಹಲವು ರೀತಿಯಲ್ಲಿ ಖಂಡಿಸಿದರು.
ಚನ್ನಪ್ಪ ವಿಜಯಕರ್, ಭಗವಂತ ಕಬಾಡೆ, ಬಲಭೀಮ ನಾಯಕಮಕ್ಕಳ, ಪ್ರಶಾಂತ ಕಾಳೆ, ಪ್ರಕಾಶ ಚಲವಾದಿ, ದೇವರಾಜ ಹಂಗರಗಿ, ಶೇಖರ ಆಲೂರ, ಸಂಗಮೇಶ ಸರೂರ, ಸುಭಾಸ ಕಟ್ಟಿಮನಿ, ರಾಮು ತಂಬೂರಿ, ದೇವರಾಜ ಹಂಗರಗಿ ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಮುಖಂಡರು ಇದ್ದರು.
ರ‌್ಯಾಲಿಯುದ್ದಕ್ಕೂ ಕೆಲವರು ಸರದಿಯಂತೆ ಚಮ್ಮಾಹುಳಿಗೆ (ಬಸವಣ್ಣನ ಭಾವಚಿತ್ರ, ವಿಭೂತಿ, ರುದ್ರಾಕ್ಷಿ, ಗುಂಡಗಡಗಿ, ಶರಣ ಸಮಗಾರ ಹರಳಯ್ಯನವರು ಬಸವಣ್ಣನವರಿಗಾಗಿ ಮಾಡಿದ್ದ ಚರ್ಮದ ಚಪ್ಪಲಿ ಸಂಕೇತವಾದ ಚಪ್ಪಲಿ ಇರುವ ಅಲಂಕೃತ ಪ್ರತಿಕೃತಿ) ತಲೆ ಮೇಲೆ ಹೊತ್ತು ಮುನ್ನಡೆದದ್ದು ಗಮನಸೆಳೆಯಿತು.
ಠಾಣೆ ಎದುರು ಜನರ ಜಮಾವಣೆ: ಒಳಮೀಸಲಾತಿಗೆ ಆಗ್ರಹಿಸಿ ನ.22ರಂದು ಕೂಡಲಸಂಗಮ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯಿಂದ ಪ್ರಾರಂಭಗೊಂಡಿದ್ದ ಪಾದಯಾತ್ರೆ ತಂಡ ಭಾನುವಾರ ರಾತ್ರಿ ಮುದ್ದೇಬಿಹಾಳ ತಲುಪಿ ವಾಸ್ತವ್ಯ ಮಾಡಿತ್ತು. ಸೋಮವಾರ ಬೆಳಗ್ಗೆ ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕುವುದನ್ನು ಮೊದಲೇ ತಿಳಿದಿದ್ದ ಪೊಲೀಸರು ಪ್ರವಾಸಿ ಮಂದಿರದಲ್ಲಿದ್ದ ಮುಖಂಡರಾದ ಬಸವರಾಜ ಸಿದ್ದಾಪೂರ, ಶೇಖರ ಆಲೂರ, ಆನಂದ ಮುದೂರ ಅವರನ್ನು ಬಲವಂತವಾಗಿ ಠಾಣೆಗೆ ಕರೆತಂದರು. ಇದನ್ನರಿತು ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಸಮುದಾಯದವರು, ಬೆಂಬಲಿಸಿದವರು ಠಾಣೆಯೆದುರು ಜಮಾಯಿಸಿದ್ದರು. ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಬಸವನಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ, ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸ್‌ಗಳಾದ ಸಂಜಯ್ ತಿಪ್ಪರಡ್ಡಿ, ಆರ್.ಎಲ್.ಮನ್ನಾಭಾಯಿ ಅವರು ಶಾಸಕರ ನಿವಾಸ ಖಾಸಗಿ ಆಸ್ತಿಯಾಗಿರುವುದರಿಂದ ಮುತ್ತಿಗೆ ಹಾಕಲು ಅವಕಾಶವಿಲ್ಲವೆಂದು ತಿಳಿಸಿ ಹೋರಾಟ ಕೈಬಿಡುವಂತೆ ಮನವೊಲಿಸಲು ಯತ್ನಿಸಿದರು. ಮಣಿಯದಿದ್ದಾಗ ಬಂಧಿಸುವ ಬೆದರಿಕೆ ಹಾಕಿದರು. ಕೊನೆಗೆ ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕುವುದನ್ನು ಕೈಬಿಡಲಾಗಿದೆ. ಹೇಮರಡ್ಡಿ ಮಲ್ಲಮ್ಮ ವೃತ್ತದವರೆಗೆ ರ‌್ಯಾಲಿ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಹೋರಾಟ ಮುಕ್ತಾಯಗೊಳಿಸುವ ಪತ್ರವನ್ನು ಮುಖಂಡರಿಂದ ಬರೆಸಿಕೊಂಡು ಬಿಟ್ಟು ಕಳಿಸಲಾಯಿತು. ಅಷ್ಟರಲ್ಲಾಗಲೇ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆನ್ನುವ ಸುದ್ದಿ ಎಲ್ಲೆಡೆ ಹರಡಿ ಸಾಕಷ್ಟು ಡ್ಯಾಮೇಜ್ ಮಾಡಿತ್ತು. ಪೊಲೀಸರ ಬಲವಂತದ ಕ್ರಮವನ್ನು ಮುಖಂಡರು ಕಟುವಾಗಿ ಖಂಡಿಸಿದರು.