ಶಾಸಕ ಭೀಮಣ್ಣರಿಂದ ವಿದ್ಯಾರ್ಥಿಗಳಿಗೆ ಕೃಷಿ ಪಾಠ

sirsi kushi pata
Published on

ಶಿರಸಿ: ಇದು ಕಾಳು ಮೆಣಸಿನ ಬಳ್ಳಿ. ಫಣಿಯೂರು ಮತ್ತು ಮಲ್ಲಿಸರ ಕಾಳು ಮೆಣಸು ತಳಿ ನಮ್ಮ ಹವಾಮಾನಕ್ಕೆ ಒಗ್ಗುತ್ತವೆ. ಚಾಲಿ ಅಡಕೆಯನ್ನು ಸುಲಿಯುವಾಗ ಈ ರೀತಿ ಕುಳಿತುಕೊಳ್ಳಬೇಕು.... ಕಾಲೇಜು ವಿದ್ಯಾರ್ಥಿಗಳು ಕೃಷಿ ಪಾಠವನ್ನು ಪ್ರಾಯೋಗಿಕವಾಗಿ ಕಲಿಯುತ್ತಿದ್ದರು. ಈ ಪಾಠವನ್ನು ಕಲಿಸುತ್ತಿರುವವರು ಯಾವುದೇ ಪ್ರಾಧ್ಯಾಪಕರಾಗಿರಲಿಲ್ಲ. ಸ್ವತಃ ಶಾಸಕ ಭೀಮಣ್ಣ ನಾಯ್ಕ ಅವರೇ ಕೃಷಿಯ ಒಂದೊಂದೇ ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು.

ಹೌದು, ನಗರದ ಪ್ರಥಮದರ್ಜೆ ಪದವಿ ಕಾಲೇಜಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಎನ್ನೆಸ್ಸೆಸ್ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ವಿಶೇಷತೆ ಎಂದರೆ ಅವರು ಕೃಷಿ ಭೂಮಿಯಲ್ಲಿ ಕೆಲಸ ಮಾಡಿ, ಕೃಷಿ ತಂತ್ರಗಳನ್ನು ಕಲಿಯುವ ಮೂಲಕ ಈ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರ ಊರಾದ ಮಳಲಗಾಂವದಲ್ಲಿ ಭೀಮಣ್ಣ ಅವರ ತೋಟದಲ್ಲಿಯೇ ವಿದ್ಯಾರ್ಥಿಗಳು ಗುರುವಾರ ಮಾಹಿತಿ ಪಡೆದುಕೊಂಡರು.

ಶಾಸಕ ಭೀಮಣ್ಣ ನಾಯ್ಕ ಮೂಲತಃ ಕೃಷಿಯ ಹಿನ್ನೆಲೆಯುಳ್ಳವರು. ಅಡಕೆ ತೋಟ, ಭತ್ತದ ಗದ್ದೆಗಳಲ್ಲಿ ಸ್ವತಃ ಕಾರ್ಯ ಮಾಡುತ್ತ ಮೇಲೆ ಬಂದವರು. ಹೀಗಾಗಿ ಅವರಿಗೆ ಕೃಷಿ ತಂತ್ರಜ್ಞಾನಗಳು ಸಹಜವಾಗಿಯೇ ಬಂದಿವೆ. ಬಿಡುವಿನ ವೇಳೆಯಲ್ಲಿ ತಮ್ಮ ಮನೆಗೆ ತೆರಳಿ ಈಗಲೂ ಅವರು ಕೃಷಿ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಗುರುವಾರ ವಿದ್ಯಾರ್ಥಿಗಳಿಗೆ ಚಾಲಿ ಅಡಕೆ ಸುಲಿಯುವುದು ಹೇಗೆ ?ಎಂಬುದನ್ನು ಅವರೇ ಹೇಳಿಕೊಟ್ಟರು. ಕಾಳು ಮೆಣಸು ಬಿಡಿಸುವುದು ಹೇಗೆ ? ಎಂಬ ಬಗ್ಗೆ ಮಾಹಿತಿ ನೀಡಿದರು. ತಮ್ಮ ತೋಟಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದು ಬೆಳೆಗಳು ಬಗ್ಗೆ, ಅವುಗಳ ರೋಗಗಳು, ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಎಂದಿಗೂ ನಂಬಿದವರನ್ನು ಕೈ ಬಿಡುವುದಿಲ್ಲ. ಕೃಷಿ ಕಾರ್ಯಕ್ಕಿಳಿಯಲು ಎಂದಿಗೂ ಹಿಂಜರಿಯಬಾರದು ಎಂಬ ಕಿವಿಮಾತು ಹೇಳಿದರು.

ಪ್ರಾಚಾರ್ಯ ಜಿ.ಟಿ. ಭಟ್, ಎಸ್.ಎಂ. ಕಮನಳ್ಳಿ, ಡಾ. ಕೆ. ಕೆಂಪರಾಜು, ಪ್ರಮುಖರಾದ ದೀಪಕ ದೊಡ್ಡೂರು, ಗಣೇಶ ದಾವಣಗೆರೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net