

ಶಿರಸಿ: ಶಿರಸಿ ಸಿದ್ದಾಪುರ ತಾಲೂಕಿನ ಎಲ್ಲ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ವಸತಿ ರಹಿತರ ಸಮೀಕ್ಷೆ ನಡೆಸಿ ಪಟ್ಟಿ ಸಿದ್ಧಪಡಿಸಿಕೊಳ್ಳಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಸೋಮವಾರ ತಾಪಂ ಸಭಾಭವನದಲ್ಲಿ ಆಯೋಜಿಸಿದ್ದ ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.
ರಸ್ತೆ, ವಿದ್ಯುತ್ ಸ್ಥಿತಿ- ಗತಿ ಬಗ್ಗೆ ಗಮನಿಸಿಕೊಳ್ಳಿ. ಮಳೆ ಇರುವ ಕಾರಣ ಅವರವರ ಪಂಚಾಯಿತಿ ಸ್ಥಿತಿ ಗತಿ ಬಗ್ಗೆ ಗಮನ ಹರಿಸಬೇಕು. ಪಿಡಿಒಗಳು ಸ್ಥಳದಲ್ಲಿಯೇ ಇರಬೇಕು. ತಮ್ಮ ವ್ಯಾಪ್ತಿಯ ಶಾಲೆಗಳ ಪರಿಸ್ಥಿತಿ, ಸ್ವಚ್ಛತೆ, ಕಟ್ಟಡದ ಸ್ಥಿತಿ-ಗತಿ ಗಮನಿಸಬೇಕು ಎಂದರು.
ಪಿಡಿಒಗಳ ಬಗ್ಗೆ ಸದಾ ದೂರುಗಳು ಬರುತ್ತಿವೆ. ಬಡವರ ಸಮಸ್ಯೆಯನ್ನು ಉದಾಸೀನ ಮಾಡಬೇಡಿ. ನೀವು ರಾಜಕಾರಣಕ್ಕಿಳಿಯಬೇಡಿ, ರಾಜಕಾರಣಕ್ಕೆ ರಾಜಕಾರಣಿಗಳಿದ್ದಾರೆ. ಗ್ರಾಮೀಣ ಭಾಗದಲ್ಲಿ ಮುಗ್ಧ್ದ ಸಂಖ್ಯೆ ಹೆಚ್ಚಿದೆ. ಎಂಡೋಸಲ್ಪಾನ್ ಪೀಡಿತರ ಬಗ್ಗೆ ಪಿಡಿಒಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಭೀಮಣ್ಣ, ಹಲವು ಕಡೆ ಜೆಜೆಎಂ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿ ವಹಿಸಿಕೊಂಡಿದೆ. ಕಾಮಗಾರಿ ಎಷ್ಟು ಸರಿ ಇದೆ ಎಂಬುದನ್ನು ಗಮನಿಸಿದ್ದೀರಾ ? ಬೇಸಿಗೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ಗಮನಿಸಿದ್ದೀರಾ ? ಯಾರದೋ ರಾಜಕಾರಣಕ್ಕೆ ಅಥವಾ ಬಿಲ್ ಮಂಜೂರಾಗುತ್ತದೆ ಎಂಬ ಕಾರಣಕ್ಕೆ ಅಸಮರ್ಪಕ ಕಾಮಗಾರಿ ಒಪ್ಪಿಕೊಳ್ಳಬೇಡಿ. ಕೋಟ್ಯಂತರ ರೂ. ಖರ್ಚು ಮಾಡಿ ಪ್ರಯೋಜನ ಆಗದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಸಿದ್ದಾಪುರ ಇಒ ದೇವರಾಜ, ಶಿರಸಿ ಪ್ರಭಾರಿ ಇಒ ಸತೀಶ ಹೆಗಡೆ ಇದ್ದರು.