ತಪ್ಪು ಹುಡುಕಿಕೊಟ್ಟವರಿಗೆ ಗೌರವಿಸಿ,  ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅಭಿಮತ

Screenshot_20251111-204727_1.jpg
Published on

ಧಾರವಾಡ: ಆದಾಯ ತೆರಿಗೆ ವಂಚಿಸುವವರ ಬಗ್ಗೆ ಮಾಹಿತಿ ನೀಡುವವರಿಗೆ ಇನ್ ಕಂ ಟ್ಯಾಕ್ಸ್ ಇಲಾಖೆ ಬಹುಮಾನ ನೀಡುತ್ತದೆ. ಇದೇ ರೀತಿ ಸರ್ಕಾರ ಹಾಗೂ ಜೈಲಿನಲ್ಲಿ ಆಗುವ ತಪ್ಪುಗಳ ಬಗ್ಗೆ ಎತ್ತಿ ತೋರಿಸುವವರಿಗೆ ತೊಂದರೆ ಕೊಡುವ ಬದಲು ಗೌರವಿಸುವ ಕೆಲಸ ಆಗಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಗುಪ್ತ ಮಾಹಿತಿ ನೀಡುವವರಿಗೆ ಯಾವುದೇ ಸಮಸ್ಯೆ ಮಾಡಬಾರದು ಎಂದರು.

ಉಗ್ರ ಚಟುವಟಿಕೆಗಳಲ್ಲಿ ಡಾಕ್ಟರ್ ಡಿಗ್ರಿ ಓದಿದವರು ಇದ್ದಾರೆ ಎಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು ಎಂಬುದು ಸ್ಪಷ್ಟವಾಗುತ್ತದೆ. ಕೇವಲ ಎಬಿಸಿಡಿ, ಅಆಇಈ ಕಲಿಸಿದರೆ ಸಾಲದು ದೇಶದ ಎಲ್ಲ ಧರ್ಮ, ವ್ಯಕ್ತಿಗಳನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕು. ಅಂತಹ ಶಿಕ್ಷಣ ಕಲಿಸಬೇಕು ಎಂದರು.

ಮುಖ್ಯವಾಗಿ ಧರ್ಮ, ರಾಷ್ಟ್ರ, ರಾಜ್ಯದ ಬಗ್ಗೆ ಪ್ರೀತಿ, ಗೌರವ ಹೊಂದುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಏನೋ ಒಂದು ಡಿಗ್ರಿಯಂತೆ ಆತ ಡಾಕ್ಟರ್ ಪದವಿ ಪಡೆದಿರಬಹುದು. ಆತನ ಬುದ್ಧಿ ಬರೊಬ್ಬರಿ ಇರಲಿಕ್ಕಿಲ್ಲ. ದೇಶಭಕ್ತಿ ಹೆಚ್ಚಿಸುವಂತಹ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದರು.

ಇಷ್ಟೇ ಅಲ್ಲ, ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು. ಇಂತಹ ತಪ್ಪುಗಳು ನಡೆದಾಗ ಅವರಿಗೆ ಕೂಡಲೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ವಿಳಂಬವಾದರೆ ಯಾರಿಗೂ ಹೆದರಿಕೆ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net