

ಹುಬ್ಬಳ್ಳಿ: ಗಣೇಶ ಮೂರ್ತಿ ವಿಸರ್ಜನೆ ಮಾಡುವವರೆಗೆ ಡಿಜೆ ಬಳಸಲು ಶ್ರೀ ಗಣೇಶೋತ್ಸವ ಸಮಿತಿಗಳಿಗೆ ಅವಕಾಶ ನೀಡಬೇಕು ಎಂದು ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾತ್ರಿ 10 ಗಂಟೆಯ ಒಳಗೆ ವಿಸರ್ಜನೆ ಮಾಡಿ, ಡಿಜೆ ಬಳಸಬೇಡಿ ಎಂಬಿತ್ಯಾದಿ ಶರತ್ತುಗಳ ಮೂಲಕ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ಅನಾವಶ್ಯಕವಾಗಿ ಗಣೇಶೋತ್ಸವ ಸಮಿತಿಗಳಿಗೆ ಹಾಗೂ ಗಣೇಶ ಭಕ್ತರಿಗೆ ತೊಂದರೆ ನೀಡುತ್ತಿದೆ ಎಂದು ಹೇಳಿದರು.
ವರ್ಷಕ್ಕೊಮ್ಮೆ ಕೆಲ ದಿನಗಳು ಮಾತ್ರ ಗಣೇಶೋತ್ಸವ ಆಚರಿಸಲಾಗುತ್ತದೆ. ಕೆಲವರು ನಿತ್ಯ ಬೆಳಗ್ಗೆ ಧ್ವನಿವರ್ಧಕ ಬಳಸಿ ತೊಂದರೆ ನೀಡುತ್ತಾರೆ. ಬೇರೆ ಸಮಾಜಕ್ಕೆ ಯಾವ ರೀತಿ ಅನುಕೂಲ ಮಾಡಿಕೊಟ್ಟಿದ್ದೀರಿ ಎಂಬುದನ್ನು ನೋಡಬೇಕು. ನಮಗೂ ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ ಎಂದರು.
ಮುತಾಲಿಕ್ ಹೇಳಿಕೆ ಸಮರ್ಥನೀಯವಲ್ಲ
ಶ್ರೀ ರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿಕೆಯನ್ನು ನಾವು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ನೀವು ನಮಗೆ ತೊಂದರೆ ಮಾಡಬೇಡಿ-ನಾವು ನಿಮಗೆ ತೊಂದರೆ ಮಾಡುವುದಿಲ್ಲ ಎಂಬ ಅರ್ಥದಲ್ಲಿ ಅವರು ಹೇಳಿರಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಜೆಡಿಎಸ್ ಜತೆ ಮೈತ್ರಿ ಅವಶ್ಯಕತೆ ಇದೆ ಎಂಬುದನ್ನು ಮನಗಂಡು ಪಕ್ಷದ ವರಿಷ್ಠರು ಮೈತ್ರಿ ಮಾಡಿಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕ ಯಾರು ಎಂಬುದು ಸಹ ಅವರೇ ನಿರ್ಧಾರ ಮಾಡುತ್ತಾರೆ. ಪಕ್ಷ ಯಾವುದೇ ಜವಾಬ್ದಾರಿ ವಹಿಸಿದರೂ ನಾವು ನಿಭಾಯಿಸಲು ಸಿದ್ಧರಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಸತೀಶ ಹಾನಗಲ್, ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ಇದ್ದರು.