ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಕೌಶಲ ಅಭಿವೃದ್ಧಿ ಕೇಂದ್ರಕ್ಕೆ ಹೆಚ್ಚಿನ ಆದ್ಯತೆ

SKILL DEVALOPMENT
ಕುಕನೂರು ತಾಲೂಕಿನ ತಳಕಲ್-ಭಾನಾಪುರ ಸರ್ಕಾರಿ ಇಂಜಿನಿಯರ್ ಕಾಲೇಜು, ಕೌಶಲಾಭಿವೃದ್ಧಿ ಕೇಂದ್ರಕ್ಕೆ ಶಾಸಕ ಬಸವರಾಜ ರಾಯರಡ್ಡಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಕಾಲೇಜು ಪ್ರಾಚಾರ್ಯ ವಿರುಪಾಕ್ಷ ಬಾಗೋಡಿ, ಕೌಶಲಾಭಿವೃದ್ಧಿ ಕೇಂದ್ರದ ವಿಶೇಷಾಧಿಕಾರಿ ಡಾ.ವೈ.ಎಚ್.ಬಸವರಾಜ, ಉಪನ್ಯಾಸಕ ಡಾ.ಎಸ್.ಎಲ್.ನದಾಫ್, ಇಂಜಿನಿಯರ್‌ಗಳಾದ ರಾಜಶೇಖರ್ ಮಳಿಮಠ, ಮಲ್ಲಿಕಾರ್ಜುನ ರಡ್ಡಿ, ಪಿ.ಹೇಮಂತ ಇದ್ದರು.
Published on

ಕುಕನೂರು: ನಮ್ಮ ಭಾಗದ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪನೆಗೊಂಡಿದ್ದು, ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ತಳಕಲ್-ಭಾನಾಪುರ ಸರ್ಕಾರಿ ಇಂಜಿನಿಯರ್ ಕಾಲೇಜು, ಕೌಶಲಾಭಿವೃದ್ಧಿ ಕೇಂದ್ರಕ್ಕೆ ಸೆ.4ರಂದು ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಶಾಸಕ ರಾಯರಡ್ಡಿ ಭೇಟಿ ನೀಡಿ ಪೂರ್ವತಯಾರಿಯನ್ನು ಪರೀಶಲಿಸಿದರು.

ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ್, ಸಂಯೋಜನೆ ಸಾಂಖ್ಯಿಕ ಸಚಿವ ಡಿ.ಸುಧಾರಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಆಗಮಿಸುತ್ತಿದ್ದು, ಕೌಶಲ ಅಭಿವೃದ್ಧಿ ಕೇಂದ್ರದ ಅಭಿವೃದ್ಧಿ ಕುರಿತು ಸಭೆ ನಡೆಯಲಿದೆ ಎಂದರು.

ಈಗಾಗಲೇ ಸರ್ಕಾರಿ ಇಂಜಿನಿಯರ್ ಕಾಲೇಜು ಅಭಿವೃದ್ಧಿಗೆ 16.50 ಕೋಟಿ ರೂ. ಬಿಡುಗಡೆಯಾಗಿದ್ದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಕೌಶಲಾಭಿವೃದ್ಧಿ ಕೇಂದ್ರದ ಹೆಚ್ಚುವರಿ ತರಬೇತಿ ಕೊಠಡಿ ಸೇರಿ ಇತರ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ 100 ಕೋಟಿ ರೂ. ಅನುದಾನ ಶೀಘ್ರ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.

ವರ್ಷಕ್ಕೆ 3 ಸಾವಿರ ಯುವಕ-ಯುವತಿಯರು ವಿವಿಧ ಕೌಶಲ ತರಬೇತಿ ಪಡೆದು, ಉದ್ಯೋಗದಲ್ಲಿ ತೊಡಗಿಕೊಳ್ಳಲು ಅನುಕೂಲ ಕಲ್ಪಿಸಲಾಗುವುದು. ಹೊಸ ಹೊಸ ಮಾದರಿಯ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ವಿನೂತನ ತರಬೇತಿ ಪಡೆದವರಿಗೆ ಮಹಾನಗರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಯಾವ ತರಬೇತಿ ನೀಡಿದರೇ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎನ್ನುವ ರೂಪುರೇಷೆ ಸಿದ್ಧ ಪಡಿಸಿ, ತರಬೇತಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಇಂಜಿನಿಯರ್ ಕಾಲೇಜು ಪ್ರಾಚಾರ್ಯ ವಿರುಪಾಕ್ಷ ಬಾಗೋಡಿ, ಕೌಶಲಾಭಿವೃದ್ಧಿ ಕೇಂದ್ರದ ವಿಶೇಷಾಧಿಕಾರಿ ಡಾ.ವೈ.ಎಚ್.ಬಸವರಾಜ, ಉಪನ್ಯಾಸಕ ಡಾ.ಎಸ್.ಎಲ್.ನದಾಫ್, ಇಂಜಿನಿಯರ್‌ಗಳಾದ ರಾಜಶೇಖರ್ ಮಳಿಮಠ, ಮಲ್ಲಿಕಾರ್ಜುನ ರಡ್ಡಿ, ಪಿ.ಹೇಮಂತ, ಮಾಜಿ ಜಿಪಂ ಉಪಾಧ್ಯಕ್ಷ ಯಂಕಣ್ಣ ಯರಾಶಿ, ಮಾಜಿ ಜಿಪಂ ಸದಸ್ಯ ಹನುಮಂತಗೌಡ ಪಾಟೀಲ್, ಪ್ರಮುಖರಾದ ಸತ್ಯನಾರಾಯಣ ಹರಪನಹಳ್ಳಿ, ಡಾ.ಶಿವನಗೌಡ ದಾನರಡ್ಡಿ, ಸಂಗಮೇಶ ಗುತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net