

ಚನ್ನಗಿರಿ: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ಕ್ರೀಡೆ, ಉದ್ಯೋಗ ಕೌಶಲ ತರಬೇತಿಗಳನ್ನು ನೀಡಿದರೆ ಸಾಲದು, ಓದಿನ ಕಡೆಗೆ ಆಸಕ್ತಿ ಮೂಡಿಸಿ ಫಲಿತಾಂಶ ಹೆಚ್ಚಿಸುವತ್ತ ಶಿಕ್ಷಕರು ಗಮನ ನೀಡಬೇಕು ಎಂದು ಶಾಸಕ ಬಸವರಾಜ್ ಶಿವಗಂಗಾ ಹೇಳಿದರು.
ತಾಲೂಕಿನ ಸಂತೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್, ರೆಡ್ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ತೋರಿಸಬೇಕು. ಓದು ನಿಮ್ಮ ಜೀವನವನ್ನು ಕಟ್ಟಿಕೊಡಬೇಕೇ ಹೊರತು ಹಾಳು ಮಾಡುವಂತಿರಬಾರದು. ಅಂತಿಮ ಪದವಿ ಮುಗಿದ ಕೂಡಲೇ ಜೀವನದ ದಿಕ್ಕು ಬದಲಾಗಲಿದೆ, ಹೊರಗಿನ ಪ್ರಪಂಚದ ಸುಖಕ್ಕೆ ಬಲಿಯಾಗಿ ನಿಮ್ಮ ಮುಂದಿನ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದರು.
ಪ್ರತಿ ತಿಂಗಳು ಸಿಡಿಸಿ ಸಮಿತಿ ಸಭೆ ಕರೆದು ಕಾಲೇಜಿನ ಪ್ರಗತಿ ಬಗ್ಗೆ ಗಮನ ಹರಿಸಿಬೇಕು. ಇಂದು ಸ್ಪರ್ಧಾತ್ಮಕ ಕಾಲವಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಶೈಕ್ಷಣಿಕ ಸಮಯವನ್ನು ಸದುಪಯೊಗ ಪಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳ ವಿನಂತಿ ಮೇರೆಗೆ ಸರ್ಕಾರಿ ಬಸ್ಗಳನ್ನು ಕಾಲೇಜಿನ ಮುಂದೆ ನಿಲ್ಲಿಸುವಂತೆ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿವೃತ್ತ ಕನ್ನಡ ಪ್ರಾಧ್ಯಾಪಕ ಅಂಜನಪ್ಪ, ಪ್ರಾಚಾರ್ಯ ಎಚ್. ಗಿರಿಸ್ವಾಮಿ, ಗ್ರಾಪಂ ಅಧ್ಯಕ್ಷೆ ರೇಣುಕಾ ಮೂರ್ತಪ್ಪ, ಉಪಾಧ್ಯಕ್ಷೆ ಮೀನಾಕ್ಷಮ್ಮ ಕರಿಯಪ್ಪ, ಕಾರ್ಯಾಧ್ಯಕ್ಷ ಎಂ. ಸಿದ್ದಪ್ಪ, ಡಿ. ಬಸವರಾಜಪ್ಪ, ಬಿ.ಎನ್. ರಾಜು, ಕೆ.ಪಿ. ಗಿರೀಶ್, ಜಿ.ಎನ್. ಸುರೇಶ್, ಡಾ. ರಾಜಶೇಖರ್, ವಿಜಯಕುಮಾರ್, ಮಲ್ಲಯ್ಯ, ಡಾ. ವೀರೇಂದ್ರ ಇತರರು ಇದ್ದರು.