ಮೋಟಾರ್ ಕೆಟ್ರು ಎಂಎಲ್‌ಎ ಹೇಳ್ಬೇಕಾ?

0903KLB07
Published on

ಕಲಬುರಗಿ: ಹಳ್ಳಿಗಳಲ್ಲಿ ನೀರಿನ ಮೋಟಾರ್, ಸ್ಟಾರ್ಟರ್ ಕೆಟ್ರೂ ಎಂಎಲ್‌ಎಗೆ ಜನ ಫೋನ್ ಮಾಡ್ತಾರೆ. ಪಿಡಿಒಗಳು ಸೇರಿ ಅಧಿಕಾರಿಗಳು ಏನು ಮಾಡ್ತೀರಿ?. ಸಣ್ಣ ಪುಟ್ಟ ಕೆಲಸವೂ ಸರಿಯಾಗಿ ಮಾಡಲು ಆಗಲ್ವಾ? ಬೇಸಿಗೆ ಮುಗಿಯುವರೆಗೆ ಪಿಡಿಒಗಳು ಗ್ರಾಪಂ ಬಿಟ್ಟು ಅಗಲುವಂತಿಲ್ಲ ಎಂದು ಶಾಸಕ ಬಸವರಾಜ ಮತ್ತಿಮಡು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚಿಸಿದರು.

ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಗುಲ್ಬರ್ಗ ಗ್ರಾಮೀಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಕಲಬುರಗಿ, ಕಮಲಾಪುರ, ಶಹಾಬಾದ್, ಆಳಂದ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ಟಾಸ್ಕ್ಫೋರ್ಸ್ ಸಭೆಯಲ್ಲಿ ಮಾತನಾಡಿ, ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಆಗಬಾರದು. ಏನೇ ಕೊರತೆ ಇದ್ರು ಅಧಿಕಾರಿಗಳು ಗಮನಕ್ಕೆ ತನ್ನಿ. ಜನರು ನನ್ನ ಮನೆ ಮುಂದೆ ಬರುವಂತ ಸ್ಥಿತಿ ತರಬೇಡಿ. ನೀವೆ ಸಮಸ್ಯೆ ಅರ್ಥ ಮಾಡಿಕೊಂಡು ಸ್ಪಂದಿಸಿ. ಸ್ಥಳೀಯವಾಗಿ ಪಿಡಿಒ, ಅಧಿಕಾರಿಗಳು ಇರುವಂತೆ ನಿಗಾ ವಹಿಸುವಂತೆ ಎಲ್ಲ ತಹಸೀಲ್ದಾರ್‌ಗಳಿಗೆ ಸೂಚಿಸಿದರು.

೬೪ ಲಕ್ಷ ರೂ. ವೆಚ್ಚದ ಕ್ರಿಯಾ ಯೋಜನೆ: ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಆಗುವ ಕಲಬುರಗಿ ತಾಲೂಕಿನ ೧೫ ಗ್ರಾಮ, ಕಮಲಾಪುರ ತಾಲೂಕಿನಲ್ಲಿ ೧೯ ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಕೆಲವು ಗ್ರಾಮಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದು, ಬಗೆಹರಿಸಲಾಗುವುದು. ಮೂರು ತಿಂಗಳಲ್ಲಿ ನೀರು ಪೂರೈಸಲು ಒಟ್ಟು ೬೪ ಲಕ್ಷ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಿದ್ದು, ಶೀಘ್ರ ಒಪ್ಪಿಸಲಾಗುವುದು ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಮತ್ತಿಮಡು, ಸಣ್ಣಪುಟ್ಟ ಕಾಮಗಾರಿ ಇದ್ದರೆ ತಿಳಿಸಿ, ಕೆಕೆಆರ್‌ಡಿಬಿಯ ಶಾಸಕರ ಅನುದಾನದಲ್ಲಿ ಹಣ ನೀಡುತ್ತೇನೆ. ಮೊದಲೇ ಎಲ್ಲ ಯೋಜನೆ ಅರಿಯಿರಿ. ನೀರಿಗಾಗಿ ಹಾಹಾಕಾರ ಎದ್ದಾಗ ನನ್ನ ಬಳಿ ಬರಬೇಡಿ. ಸ್ವಲ್ಪ ಮುಂದಾಲೋಚನೆ ಇರಲಿ ಎಂದು ಸೂಚಿಸಿದರು.

ಶಹಾಬಾದ್ ತಾಲೂಕಿನಲ್ಲಿ ತೊನಸನಳ್ಳಿಯಲ್ಲಿ ಜೆಜೆಎಂ ಜಾಕ್‌ವೇಲ್‌ನಲ್ಲಿ ಹೂಳು ತುಂಬಿದ್ದು, ತೆಗೆಯಬೇಕಿದೆ ಎಂದು ಅಧಿಕಾರಿ ಗಮನಕ್ಕೆ ತಂದಾಗ, ಇಷ್ಟು ದಿನಾ ಎಲ್ಲಿಗೆ ಹೋಗಿದ್ರಿ. ನನ್ನ ಗಮನಕ್ಕೆ ತರದೇ ಹೇಗೆ ಅನುದಾನ ನೀಡಬೇಕು. ನಾನು ಸಭೆ ಕರೆಯಬೇಕಾ? ಜನ ಮನೆ ಮುಂದೆ ಬಂದು ನಿಂತು ಕೇಳಿದಾಗ ಎಚ್ಚರಗೊಳ್ತೀರಾ? ಮೊದಲೇ ಅರಿತು, ಸ್ಪಂದಿಸಿ ಎಂದು ತರಾಟೆಗೆ ತೆಗೆದುಕೊಂಡರು. ಶಹಾಬಾದ್ ತಾಲೂಕಿನ ಎಲ್ಲಿಯೂ ಸಮಸ್ಯೆ ಆಗದಂತೆ ನೋಡಿಕೊಳ್ಳಿ, ಐದು, ೧೦, ೧೫ ಲಕ್ಷದ ಸಣ್ಣಪುಟ್ಟ ನೀರಿನ ಸಮಸ್ಯೆ ಇದ್ದರೆ ತಿಳಿಸಿ ಎಂದು ಸೂಚಿಸಿದರು.

ಆಳಂದ ತಾಲೂಕಿನ ವ್ಯಾಪ್ತಿಯ ಎರಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎರಡ್ಮೂರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿ ಗಮನಕ್ಕೆ ತಂದರು. ಮೂರು ಕೋಟಿ ರೂ. ನೀಡಿದ್ದು, ೮೬ ಕೊಳವೆ ಬಾವಿ ಕೊರೆಯಲು ಅನುಮತಿ ನೀಡಲಾಗಿದೆ. ಶೀಘ್ರ ಸಮಸ್ಯೆ ಇರುವ ಗ್ರಾಮಗಳಲ್ಲಿ ಕೆಲಸ ಪ್ರಾರಂಭಿಸಿ ಎಂದು ಸೂಚಿಸಿದರು.

ತಹಸೀಲ್ದಾರ್‌ಗಳಾದ ಮೊಹ್ಮದ್ ಮೋಸಿನ್, ಕೆ.ಆನಂದಶೀಲ, ಅಣ್ಣಾರಾವ ಪಾಟೀಲ್, ತಾಲೂಕು ಪಂಚಾಯಿತಿ ಇಒಗಳಾದ ಎಂ.ಡಿ.ಸೈಯದ್ ಪಟೇಲ್, ನೀಲಗಂಗಾ ಎಸ್.ಬಿ., ಗುರುರಾಜ ಸಂಗಾವಿ, ಮಾನಪ್ಪ, ಮಲ್ಲಿಕಾರ್ಜುನ ಸೇರಿ ನಾಲ್ಕು ತಾಲೂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜೆಜೆಎಂ ಯಾವಾಗ ಪೂರ್ಣ ಮಾಡಿ: ಗುಲ್ಬರ್ಗ ಗ್ರಾಮೀಣ ಕ್ಷೇತ್ರದಲ್ಲಿ ಜಲ್ ಜೀವನ್ ಮಿಷನ್ ಅಡಿ ಕಾಮಗಾರಿಯ ದೂರು ನಿತ್ಯ ಬರುತ್ತಿವೆ. ರಸ್ತೆ ಅಗೆದು ಅಷ್ಟೇ ಬಿಟ್ಟಿದ್ದೀರಿ. ನೀರು ಪೂರೈಕೆ ಆಗುತ್ತಿಲ್ಲ. ಜನ ನಿತ್ಯ ಗೋಳು ತೋಡಿಕೊಳ್ಳುತ್ತಿದ್ದಾರೆ. ಅತಿ ಹೆಚ್ಚು ದೂರು ಜೆಜೆಎಂ ಕಾಮಗಾರಿಯದ್ದು ಇದೆ. ಆರು ತಿಂಗಳು ರಸ್ತೆ ಅಗೆದು ಬಿಟ್ಟರೆ ಜನರ ಗತಿ ಏನು? ವರ್ಷಗಟ್ಟಲೇ ಕಾಮಗಾರಿ ಮಾಡ್ತಾ ಇದ್ದೀರಿ ಅಂದ್ರೆ ಹೇಗೆ? ಶೀಘ್ರದಲ್ಲಿ ಪೂರ್ಣಗೊಳಿಸಿ. ಜನರಿಗೆ ತೊಂದರೆ ಆಗದಂತೆ ಕೆಲಸಕ್ಕೆ ಆದ್ಯತೆ ನೀಡಿ. ಎರಡ್ಮೂರು ತಿಂಗಳಲ್ಲಿ ಇಡೀ ಕಾಮಗಾರಿ ಪೂರ್ಣಗೊಳಿಸಬೇಕು. ವಿಳಂಬ ಮಾಡುವವರಿಗೆ ನೋಟಿಸ್ ನೀಡಿ ಎಂದು ಶಾಸಕ ಬಸವರಾಜ ಮತ್ತಿಮಡು ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net