

ಚನ್ನಗಿರಿ: ಕೃಷಿ ಜತೆಯಲ್ಲಿ ಹೈನುಗಾರಿಕೆ ರೈತರ ಜೀವನವನ್ನು ಹಸನಾಗಿಸುತ್ತದೆ, ಕಷ್ಟವಿಲ್ಲದೆ ಜೀವನ ಸುಗಮವಾಗಿ ಸಾಗಿಸಬಹುದು. ಅಲ್ಲದೇ ಹೈನು ಉದ್ಯಮ ವೃದ್ಧಿಯಾಗಲು ಅನುಕೂಲವಾಗಿದೆ ಎಂದು ಶಾಸಕ ಬಸವರಾಜ್ ಶಿವಗಂಗಾ ತಿಳಿಸಿದರು.
ತಾಲೂಕಿನ ಮೆದಿಕೆರೆ ಗ್ರಾಮದಲ್ಲಿ ಬುಧವಾರ ಕೃಷಿ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಕೃಷಿವಿಕಾಸ್ ಯೋಜನೆಯಡಿ ಗ್ರಾಮದ 54 ರೈತರಿಗೆ ಆಕಳನ್ನು ವಿತರಿಸಿ ಮಾತನಾಡಿದರು.
ಪಶು ಆಧಾರಿತ ಕೃಷಿ ಉತ್ತೇಜಿಸಲು ಮತ್ತು ಆರ್ಥಿಕವಾಗಿ ಸಬಲರಾಗಲು ಪ್ರತಿ ರೈತರಿಗೆ ಆಕಳನ್ನು ಖರೀದಿಸಲು 30 ಸಾವಿರ ರೂ. ಸಹಾಯಧನ ನೀಡಲಾಗಿದೆ. ಮೆದಿಕೆರೆ ಗ್ರಾಮಕ್ಕೆ ಒಟ್ಟು 16.20 ಲಕ್ಷ ರೂ. ಗಳ ಸಹಾಯಧನ ನೀಡಲಾಗಿದೆ. ಈ ಕಾರ್ಯಕ್ರಮದಿಂದ ಪ್ರತಿದಿನ 80 ರಿಂದ 120 ಲೀಟರ್ ಹಾಲು ಉತ್ಪಾದನೆ ಹೆಚ್ಚಾಗಿದ್ದು, ಪ್ರತಿ ಲೀಟರ್ಗೆ 40 ರೂ. ನಂತೆ ಒಟ್ಟು 10 ಸಾವಿರ ಆದಾಯ ಹೆಚ್ಚಾಗುತ್ತದೆ. ರೈತರು ಮಿಶ್ರ ಕೃಷಿ ಕೈಗೊಳ್ಳಲು ಹೈನುಗಾರಿಕೆ ಅನುಕೂಲ ಮತ್ತು ಈ ಯೋಜನೆಯ ಸದುಪಯೋಗವನ್ನು ಪಡೆಯಬೇಕು ಎಂದರು.
ಜಿಲ್ಲಾ ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತಾಲೂಕು ಕೃಷಿ ಅಧಿಕಾರಿ ಅರುಣಕುಮಾರ್, ಹೊನ್ನಾಳಿ ರೇವಣಸಿದ್ದನಗೌಡ, ಕಾಡಜ್ಜಿ ತಿಪ್ಪೇಸ್ವಾಮಿ, ಡಾ. ಅಶೋಕ್, ಆರ್ಐ ಶ್ರೀನಿವಾಸ್, ಮಹತಬ್ಅಲಿ, ಏಕಾಂತ್, ಗ್ರಾಪಂ ಸದಸ್ಯ ಮಂಜಪ್ಪ, ರಂಗಸ್ವಾಮಿ, ಡಿ.ವೈ. ರಾಜಣ್ಣ, ಪಿ.ಎಸ್. ಕುಮಾರಣ್ಣ, ಬೀರಲಿಂಗಪ್ಪ, ಟಿ.ಕೆ. ತಿಪ್ಪೇಶ್ ಹಾಗೂ ಗ್ರಾಮಸ್ಥರು ಇದ್ದರು.