ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

16myk1a
Published on

ಮಾಯಕೊಂಡ: ಕ್ಷೇತ್ರದಲ್ಲಿ ನಡೆಯುತ್ತಿರುವ ಸಮುದಾಯ ಭವನ, ಸಿಸಿ ರಸ್ತೆ ಸೇರಿ ಇತರೆ ಯಾವುದೇ ಕಾಮಗಾರಿಗಳು ಉತ್ತಮ ಗುಣಮಟ್ಟದ್ದಾಗಿರಬೇಕು, ಕಳಪೆಯಾದರೆ ನಾನು ಸಹಿಸುವುದಿಲ್ಲ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಬನಶಂಕರಿ ದೇವಿ ಸಮುದಾಯ ಭವನದ ನೂತನ ಕಟ್ಟಡ, ಲಕ್ಕಮುತ್ತೇನಹಳ್ಳಿ ಗ್ರಾಮದ ಸಿಸಿ ರಸ್ತೆ, ಗುಡಾಳು ಗ್ರಾಪಂ ವ್ಯಾಪ್ತಿಯ ಮ್ಯಾಸರಹಳ್ಳಿ ಗ್ರಾಮದ ಸಿಸಿ ರಸ್ತೆ ಹಾಗೂ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕ್ಷೇತ್ರದ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಅನುದಾನ ಮಂಜೂರಾಗಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಣಮಟ್ಟದ ಹಾಗೂ ವ್ಯವಸ್ಥಿತ ಕಾಮಗಾರಿಗಳನ್ನು ಮಾಡುವ ಮೂಲಕ ಅನುದಾನವನ್ನು ಸಾರ್ಥಕ ಪಡಿಸಬೇಕು ಎಂದು ತಾಕೀತು ಮಾಡಿದರು.

ಮಾಯಕೊಂಡ, ಆನಗೋಡು, ಅಣಜಿ, ಲೋಕಿಕೆರೆ ಹೋಬಳಿಗಳ ಹಲವಾರು ಸಂಪರ್ಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಇತ್ತೀಚೆಗೆ ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿ 30 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ ಎಂದರು.

ಶಿಥಿಲವಾಗಿರುವ ಸರ್ಕಾರಿ ಶಾಲೆಗಳ ಕೊಠಡಿಗಳಿಗೆ ಕಾಯಕಲ್ಪ ನೀಡಿ, ನೂತನ ಹೈಟೆಕ್ ಕೊಠಡಿ, ಶೌಚಗೃಹ ಸೇರಿ ಅವಶ್ಯಕ ಸವಲತ್ತು ಕಲ್ಪಿಸಲು ಇಲಾಖೆ ಸಚಿವರಿಗೆ ಮನವಿ ಮಾಡಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಸರ್ಕಾರಿ ಶಾಲೆಗಳನ್ನು ಮಾದರಿಯಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.

25 ಲಕ್ಷ ರೂ. ಆನಗೋಡು ಬನಶಂಕರಿ ಸಮುದಾಯ ಭವನ, 42 ಲಕ್ಷ ರೂ. ಲಕ್ಕಮುತ್ತೇನಹಳ್ಳಿ ಸಿಸಿ ರಸ್ತೆ, 43 ಲಕ್ಷ ರೂ. ಮ್ಯಾಸರಹಳ್ಳಿ ಗ್ರಾಮದ ಸಿಸಿ ರಸ್ತೆ ಹಾಗೂ 12 ಲಕ್ಷ ರೂ. ಅಂಬೇಡ್ಕರ್ ಸಮುದಾಯ ಭವನ ನಿರ್ವಣಕ್ಕೆ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಮುಖಂಡ ನಾಗಪ್ಪ ಗೌಡ್ರು, ಗ್ರಾಪಂ ಸದಸ್ಯ ತೀರ್ಥಡಿ ಶಿವಣ್ಣ, ದೇವೇಂದ್ರಪ್ಪ, ಶೇಖರಪ್ಪ, ಮಂಜುನಾಥ್, ರಂಗನಾಥ್, ಅಂಗಡಿ ಬಸಣ್ಣ, ಮುನಿಯಜ್ಜ, ತಾಪಂ ಮಾಜಿ ಸದಸ್ಯ ಗುಮ್ಮನೂರು ಶಂಬಣ್ಣ, ಗುಡಾಳು ರುದ್ರೇಶ್, ಕಾಟಿಹಳ್ಳಿ ಹಾಲೇಶಪ್ಪ, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net